ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಮಹಾನಗರದ ಐಟಿ ಬಿಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್ ಗಳೂ ಸಹ ಕಾರಣ, ಐಟಿ ಸಂಸ್ಥೆಯ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದಂತಹ ರಾಜಕಾಲುವೆಗಳನ್ನು ಮತ್ತು ರಾಜಕಾಲುವೆಗಳ ಬಫ್ಫರ್ ಜೋನ್ ಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡ ಪರಿಣಾಮ ಇಷ್ಟೆಲ್ಲಾ ಅವಾಂತರವಾಗಿದೆ ಎಂದು ಸೇವ್ ಬೆಂಗಳೂರು ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಪತ್ರ ಬರೆದಿರುವ ಐಟಿ ಉದ್ಯಮಿ ಮೋಹನ್ ದಾಸ್ ಪೈಗೆ ಬಹಿರಂಗ ಪತ್ರದ ಮೂಲಕ ಬಿಜೆಪಿ ನಾಯಕ ಎನ್ ಆರ್ ರಮೇಶ್ ಟಾಂಗ್ ನೀಡಿದ್ದಾರೆ.
ಐದು ಪುಟಗಳ ಸುದೀರ್ಘ ಬಹಿರಂಗ ಪತ್ರ.. ಬರೆದಿರುವ ಅವರು, ಬೆಂಗಳೂರು ಮಹಾನಗರದಲ್ಲಿ ನಿರ್ಮಾಣಗೊಂಡು ಪ್ರಾರಂಭವಾದ ಐಟಿ ಬಿಟಿ ಸಂಸ್ಥೆಗಳು ಮತ್ತು ಟೆಕ್ ಪಾರ್ಕ್, ಬ್ಯುಸಿನೆಸ್ ಪಾರ್ಕ್ ಗಳ ಅನುಕೂಲಕ್ಕೆಂದೇ 1999 ರಿಂದ 2004 ರ 05 ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಸುಮಾರು 4,500 ಕಿ. ಮೀ. ಗಳಷ್ಟು ಉದ್ದದ ರಸ್ತೆಗಳಲ್ಲಿ ಒಎಫ್ಸಿ ಡಕ್ಟ್ ಗಳನ್ನು ಹಾಕಿಕೊಳ್ಳಲು "ರಸ್ತೆ ಅಗೆತ ಶುಲ್ಕಗಳನ್ನು ಪಡೆದುಕೊಳ್ಳದೇ, ಸಂಪೂರ್ಣ ಉಚಿತವಾಗಿ ಅನುಮತಿಯನ್ನು ನೀಡಲಾಗಿತ್ತು ಮತ್ತು 4,500 ಕಿ. ಮೀ. ಉದ್ದದ ರಸ್ತೆಗಳ ಪುನಶ್ಚತನ ಕಾರ್ಯಕ್ಕೆಂದೇ ಸುಮಾರು 3,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ರಾಜ್ಯ ಸರ್ಕಾರವು ತನ್ನ ಖಜಾನೆಯಿಂದ ಭರಿಸಿತ್ತು ಎಂದು ಐಟಿ ಕಂಪನಿಗಳು ಸರ್ಕಾರದಿಂದ ಪಡೆದುಕೊಂಡಿರುವ ಅನುಕೂಲಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತುತ ವರ್ಷ ಐಟಿ ಬಿಟಿ ಕಂಪೆನಿಗಳು ಮತ್ತು ಟೆಕ್ ಪಾರ್ಕ್ ಗಳು ಜಲಾವೃತಗೊಂಡಿರುವ ಬಗ್ಗೆ ಉಲ್ಲೇಖಿಸಿರುತ್ತೀರಿ.ಆದರೆ ಬೆಂಗಳೂರು ಮಹಾನಗರದ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಮಹಾನಗರದ ಐಟಿ ಬಿಟಿ ಕಂಪೆನಿಗಳು ಮತ್ತು ಟೆಕ್ ಪಾರ್ಕ್ ಗಳೂ ಸಹ ಕಾರಣ. ವಿಶೇಷವಾಗಿ ಬೆಂಗಳೂರು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದಲ್ಲಿ ಇರುವಂತಹ 79 ಟೆಕ್ ಪಾರ್ಕ್ ಗಳು, ELCIA (Electronics City Industries Association) ಅಡಿಯಲ್ಲಿ ಇರುವಂತಹ 250 ಕ್ಕೂ ಹೆಚ್ಚು ಐಟಿ ಬಿಟಿ ಕಂಪೆನಿಗಳು ಹಾಗೂ ಮಹದೇವಪುರದ ಐಟಿಪಿಎಲ್ ನಲ್ಲಿರುವ 100 ಕ್ಕೂ ಹೆಚ್ಚು ಐಟಿ ಕಂಪೆನಿಗಳು ತಾವು ನಿರ್ಮಾಣ ಮಾಡಿರುವ ತಮ್ಮ ತಮ್ಮ ಸಂಸ್ಥೆಯ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದಂತಹ ರಾಜಕಾಲುವೆಗಳನ್ನು ಮತ್ತು ರಾಜಕಾಲುವೆಗಳ ಬಫ್ಫರ್ ಜೋನ್ ಗಳನ್ನು ಬಹುತೇಕ ಒತ್ತುವರಿ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿರುವ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಗಳಿಸಿರುವ Infosys, Wipro, Biocon, Tech Mahindra, Siemens, Tata Power, Robert Bosch, IBM, TCS, HCL, C - Dot, HP (Hewlett - Packard) ನಂತಹ ಸಂಸ್ಥೆಗಳು ತಾವು ನಿರ್ಮಾಣ ಮಾಡಿರುವ ಕಟ್ಟಡಗಳ ವ್ಯಾಪ್ತಿಯಲ್ಲಿದ್ದಂತಹ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದು ಅಥವಾ ರಾಜಕಾಲುವೆಗಳ Primary Drain (ಬೃಹತ್ ಮಳೆ ನೀರುಗಾಲುವೆ) ಮತ್ತು Secondary Drain (ದ್ವಿತೀಯ ಹಂತದ ರಾಜಕಾಲುವೆ) ಗಳ ಅಗಲವನ್ನು ಕಡಿತಗೊಳಿಸಿ ಮಾರ್ಗಾಂತರ (Diversion) ಮಾಡಿರುವುದು ತಮಗೂ ತಿಳಿದಿದೆ ಎಂದು ಭಾವಿಸಿರುತ್ತೇನೆ ಎಂದು ಮೋಹನ್ ದಾಸ್ ಪೈಗೆ ತಿರುಗೇಟು ನೀಡಿದ್ದಾರೆ.
ಹೊರ ವರ್ತಲ ರಸ್ತೆ ಸೇರಿದಂತೆ ಬೆಂಗಳೂರು ಮಹಾನಗರದಲ್ಲಿರುವಂತಹ ಸೆಸ್ನಾ ಟೆಕ್ ಪಾರ್ಕ್,ಇಕೋಸ್ಪೇಸ್ ಟೆಕ್ ಪಾರ್ಕ್,ಸಲಾರ್ ಪುರಿಯಾ ಟೆಕ್ ಪಾರ್ಕ್,ಮಾನ್ಯತಾ ಟೆಕ್ ಪಾರ್ಕ್, ಬಾಗ್ ಮನೆ ಟೆಕ್ ಪಾರ್ಕ್ ಸೇರಿದಂತೆ 79 ಟೆಕ್ ಪಾರ್ಕ್ ಗಳ 90,85,000 ಚ. ಅಡಿಗಳಷ್ಟು ಒಟ್ಟು ನಿರ್ಮಿತ ಪ್ರದೇಶಗಳ ಪೈಕಿ ಶೇ. 25% ರಷ್ಟು ನಿರ್ಮಿತ ಪ್ರದೇಶವನ್ನು ಸಂಪೂರ್ಣವಾಗಿ ರಾಜಕಾಲುವೆಗಳು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡೇ ನಿರ್ಮಿಸಿರುವಂತಹ ಕಟ್ಟಡಗಳಾಗಿವೆ. ಕೇವಲ ಈ 79 ಟೆಕ್ ಪಾರ್ಕ್ ಗಳು ಮಾತ್ರವೇ ಕನಿಷ್ಠ 06 ಲಕ್ಷ ಚ. ಅಡಿಗಳಷ್ಟು ವಿಸ್ತೀರ್ಣದ ರಾಜಕಾಲುವೆಗಳ ಪ್ರದೇಶವನ್ನು ಸಂಪೂರ್ಣವಾಗಿ ಕಬಳಿಕೆ ಮಾಡಿರುವಂತಹ ವಿಷಯ ದಾಖಲೆಗಳಿಂದ ಈಗಾಗಲೇ ರುಜುವಾತಾಗಿರುತ್ತದೆಯಲ್ಲದೇ, ಈ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳೂ ಸಹ ದಾಖಲಿಸಲ್ಪಟ್ಟಿರುತ್ತವೆ !!! ಅಲ್ಲದೇ ಮಹದೇವಪುರದ ಐಟಿಪಿಎಲ್ ನಲ್ಲಿರುವ ಅಕ್ಸೆಂಚರ್, ಎಂಯು ಸಿಗ್ಮಾ,ಏಜಿಸ್, ಟೆಸ್ಕೋ, ಡೆಲ್ ಗಳಂತಹ ಮಾಹಿತಿ ತಂತ್ರಜ್ಞಾನ ಸಮೂಹ ಸಂಸ್ಥೆಗಳು ಅವುಗಳಿಗೆ ಹೊಂದಿಕೊಂಡಂತಿರುವ ಗಿಡ್ಡನಕೆರೆ ಮತ್ತು ಕುಂದಲ ಹಳ್ಳಿ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಸತ್ಯವನ್ನೂ ಸಹ ತಮಗೆ ತಿಳಿಸಲು ಇಚ್ಛಿಸುತ್ತೇನೆ ಎಂದು ಸೇವ್ ಬೆಂಗಳೂರು ಎಂದು ಪತ್ರ ಬರೆದಿದ್ದ ಪೈಗೆ ತಿರುಗೇಟು ನೀಡಿದ್ದಾರೆ.
ಸಿಎಸ್ಆರ್ ಅನುದಾನದಲ್ಲಿ ವಂಚನೆ:ಬೆಂಗಳೂರು ಮಹಾನಗರದಲ್ಲಿ 3,758 ಐಟಿ ಕಂಪೆನಿಗಳು, 92 ಬಿಟಿ ಕಂಪೆನಿಗಳು ಮತ್ತು 79 ಟೆಕ್ ಪಾರ್ಕ್ ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀ ವರ್ಷ ಎರಡು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ನಡೆಸುತ್ತಿರುತ್ತವೆ. ನ್ಯಾಯಯುತವಾಗಿ ELCIA, ORRCA ಮತ್ತು ITPL ಇರುವ ಮೂರೂ ಪ್ರದೇಶಗಳ ಸಂಸ್ಥೆಗಳೇ ವಾರ್ಷಿಕವಾಗಿ ಸಿಎಸ್ಆರ್ ನಿಯಮಗಳಿಗೆ ಅನುಗುಣವಾಗಿ ಕನಿಷ್ಠ 2,500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಹಣವನ್ನು ಸಿಎಸ್ಆರ್ ನಿಧಿಯ ಮೂಲಕ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಮೂಲಕ ಸಾರ್ವಜನಿಕರ ಉಪಯೋಗದ ಕೆಲಸಗಳಿಗೆ ಉಪಯೋಗಿಸಬೇಕಿದ್ದರೂ ಸಹ ತಾವು ಕೇವಲ ಹತ್ತಾರು ಕೋಟಿ ರೂಪಾಯಿಗಳಷ್ಟನ್ನು ಮಾತ್ರವೇ ಈ ಅನುದಾನದಲ್ಲಿ ವಿನಿಯೋಗಿಸುತ್ತಾ, ಸಿಎಸ್ಆರ್ ಅನುದಾನದಲ್ಲೂ ಸಹ ಬೆಂಗಳೂರು ಮಹಾನಗರಕ್ಕೆ ಬೃಹತ್ ಮಟ್ಟದಲ್ಲಿ ವಂಚನೆ ಮಾಡಿರುತ್ತೀರಿ ಎಂದು ಗಂಭೀರ ಆರೋಪ ಮಾಡಿದ್ದಾರೆ.