ಕರ್ನಾಟಕ

karnataka

ETV Bharat / business

19 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಬಿಟ್ ಕಾಯಿನ್ ಮೌಲ್ಯ

ಬಿಟ್ ಕಾಯಿನ್ ಮೌಲ್ಯ 19 ತಿಂಗಳ ಗರಿಷ್ಠ ಮಟ್ಟಕ್ಕೇರಿದ್ದು, ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ.

Global crypto market hits $1.5 trillion as panic buying fuels Bitcoin price
Global crypto market hits $1.5 trillion as panic buying fuels Bitcoin price

By ETV Bharat Karnataka Team

Published : Dec 5, 2023, 12:34 PM IST

ನವದೆಹಲಿ: ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ 42,000 ಡಾಲರ್​ಗೆ ತಲುಪಿದೆ ಎಂದು ವರದಿಗಳು ಮಂಗಳವಾರ ತಿಳಿಸಿವೆ. ಇದು ಬಿಟ್​ ಕಾಯಿನ್​ ಮೌಲ್ಯದ 19 ತಿಂಗಳ ಗರಿಷ್ಠ ಮಟ್ಟವಾಗಿದೆ. ಬಿಟ್ ಕಾಯಿನ್ ಮೌಲ್ಯದಲ್ಲಿ ಗರಿಷ್ಠ ಏರಿಕೆಯ ಕಾರಣದಿಂದ ಮೇ 2022ರ ನಂತರ ಇದೇ ಮೊದಲ ಬಾರಿಗೆ ಕ್ರಿಪ್ಟೊ ಮಾರುಕಟ್ಟೆ ಬಂಡವಾಳ 1.5 ಟ್ರಿಲಿಯನ್ ಡಾಲರ್​ಗೆ ತಲುಪಿದೆ. ಮಂಗಳವಾರ ಬಿಟ್ ಕಾಯಿನ್ ಬೆಲೆ ಪ್ರತಿ ಟೋಕನ್​ಗೆ 41,700 ಡಾಲರ್​ನಷ್ಟಿತ್ತು.

ಬಡ್ಡಿದರ ಕಡಿಮೆಯಾಗಿರುವುದು, ಸ್ಪಾಟ್ ಬಿಟ್ ಕಾಯಿನ್ ಇಟಿಎಫ್ ಜಾರಿಯಾಗುವ ನಿರೀಕ್ಷೆ ಮತ್ತು "ಪ್ಯಾನಿಕ್ ಖರೀದಿ"ಗಳ ಕಾರಣದಿಂದ ಬಿಟ್ ಕಾಯಿನ್​ ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದಾಗ್ಯೂ, ಸಣ್ಣ ಕ್ರಿಪ್ಟೋ ಟೋಕನ್​ಗಳ ಬೆಲೆಗಳು ಹೆಚ್ಚಾಗಿಲ್ಲ. ಈಥರ್ (ಇಟಿಎಚ್), ಬಿಎನ್​ಬಿ ಮತ್ತು ಎಡಿಎ ದಿನದಲ್ಲಿ ಶೇಕಡಾ 2 ರಿಂದ 3 ರಷ್ಟು ಏರಿಕೆ ಕಂಡರೆ, ಎಕ್ಸ್ಆರ್​ಪಿ ಸಮತಟ್ಟಾಗಿ ವಹಿವಾಟು ನಡೆಸಿತು.

ಬಿಟ್​ ಕಾಯಿನ್ ಭವಿಷ್ಯದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಬಹುದಾದರೂ ಅಲ್ಪಾವಧಿಯಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು ಎಂಬುದು ಕೆಲ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಬಿಟ್​ ಕಾಯಿನ್​ ಇಂದಿನಿಂದ ಒಂದು ವರ್ಷದ ನಂತರ ತನ್ನ ಹಿಂದಿನ ಉತ್ತುಂಗವನ್ನು ತಲುಪಬಹುದು ಎಂದು ಗ್ಯಾಲಕ್ಸಿ ಡಿಜಿಟಲ್ ಹೋಲ್ಡಿಂಗ್ಸ್ ಲಿಮಿಟೆಡ್​ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ನೊವೊಗ್ರಾಟ್ಜ್ ಭವಿಷ್ಯ ನುಡಿದಿದ್ದಾರೆ. ಬಿಟ್ ಕಾಯಿನ್ 2021 ರ ನವೆಂಬರ್​ನಲ್ಲಿ ಸುಮಾರು 69,000 ಡಾಲರ್​ನ ಗರಿಷ್ಠ ಮಟ್ಟ ತಲುಪಿತ್ತು. ಆದರೆ, ಕಳೆದ ವರ್ಷ ಶೇ 64 ರಷ್ಟು ಮೌಲ್ಯ ಕಳೆದುಕೊಂಡಿತ್ತು. ಬಿಟ್ ಕಾಯಿನ್ ಇಟಿಎಫ್ ವಹಿವಾಟು ಪ್ರಾರಂಭವಾದಲ್ಲಿ ಒಂದು ವರ್ಷದೊಳಗೆ ಶತಕೋಟಿ ಡಾಲರ್​ನಷ್ಟು ಹೂಡಿಕೆ ಇಟಿಎಫ್​ಗೆ ಹರಿಯಲಿದೆ ಎಂದು ನೊವೊಗ್ರಾಟ್ಜ್ ಹೇಳಿದ್ದಾರೆ.

ರೂಪಾಯಿ ಮೌಲ್ಯ ಕುಸಿತ: ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್​ನ ಚೇತರಿಕೆಯ ಮಧ್ಯೆ ಭಾರತೀಯ ರೂಪಾಯಿ ಸೋಮವಾರ ಅಮೆರಿಕ ಡಾಲರ್ ವಿರುದ್ಧ 8 ಪೈಸೆ ಕುಸಿದಿದೆ. ರೂಪಾಯಿ ಶುಕ್ರವಾರ ಇದ್ದ 83.29 ಕ್ಕೆ ಹೋಲಿಸಿದರೆ ಡಾಲರ್​ಗೆ 83.37 ರಲ್ಲಿ ಕೊನೆಗೊಂಡಿತು. ಆರು ಕರೆನ್ಸಿಗಳ ವಿರುದ್ಧ ಡಾಲರ್​ನ ಮೌಲ್ಯ ಅಳೆಯುವ ಡಾಲರ್ ಸೂಚ್ಯಂಕ ಶೇಕಡಾ 0.06 ರಷ್ಟು ಏರಿಕೆಯಾಗಿ 103.32 ಕ್ಕೆ ತಲುಪಿದೆ.

ಫೆಬ್ರವರಿಯಲ್ಲಿ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬೆಲೆಗಳು ಬ್ಯಾರೆಲ್​ಗೆ ಶೇಕಡಾ 0.63 ರಷ್ಟು ಕುಸಿದು 78.38 ಡಾಲರ್​ಗೆ ತಲುಪಿವೆ. ಹಾಗೆಯೇ ಜನವರಿಗಾಗಿ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ (ಡಬ್ಲ್ಯುಟಿಐ) ಕ್ರೂಡ್ ಫ್ಯೂಚರ್ ಶೇಕಡಾ 0.55 ರಷ್ಟು ಕುಸಿದು 73.66 ಡಾಲರ್​ಗೆ ತಲುಪಿದೆ.

ಇದನ್ನೂ ಓದಿ :2 ಸಾವಿರ ರೂ. ಮುಖಬೆಲೆಯ ಶೇ 97ರಷ್ಟು ನೋಟು ವಾಪಸ್: ಆರ್​ಬಿಐ

ABOUT THE AUTHOR

...view details