ಕರ್ನಾಟಕ

karnataka

ETV Bharat / business

ಬಿಟ್​ಕಾಯಿನ್ ಇಟಿಎಫ್​ ಷೇರು ವಹಿವಾಟಿಗೆ ಕೊನೆಗೂ ಅನುಮತಿ ನೀಡಿದ ಯುಎಸ್ - ಕ್ರಿಪ್ಟೋಕರೆನ್ಸಿ

ಅಮೆರಿಕವು ಬಿಟ್​ಕಾಯಿನ್ ಇಟಿಎಫ್​ಗಳ ಟ್ರೇಡಿಂಗ್​ಗೆ ಇದೇ ಮೊದಲ ಬಾರಿಗೆ ಅನುಮತಿ ನೀಡಿದೆ.

US approves 1st-ever Bitcoin exchange-traded product shares
US approves 1st-ever Bitcoin exchange-traded product shares

By ETV Bharat Karnataka Team

Published : Jan 11, 2024, 12:25 PM IST

ಸ್ಯಾನ್ ಫ್ರಾನ್ಸಿಸ್ಕೋ: ಯುಎಸ್ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​ಚೇಂಜ್ ಕಮಿಷನ್ (ಎಸ್ಇಸಿ) ಕೊನೆಗೂ ಹಲವಾರು ಸ್ಪಾಟ್ ಬಿಟ್​ಕಾಯಿನ್​ ಎಕ್ಸ್​ಚೇಂಜ್-ಟ್ರೇಡೆಡ್ ಪ್ರಾಡಕ್ಟ್ (ಇಟಿಪಿ) ಷೇರುಗಳ ವಹಿವಾಟಿಗೆ ಅನುಮತಿ ನೀಡಿದೆ. ಇದರೊಂದಿಗೆ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾಗಿರುವ ಬಿಟ್​ ಕಾಯಿನ್ ಜಾಗತಿಕ ಹಣಕಾಸು ವ್ಯವಸ್ಥೆಯೊಳಗೆ ಸೇರಿಕೊಂಡಿದೆ.

ಎಸ್ಇಸಿ ತೆಗೆದುಕೊಂಡಿರುವ ಈ ನಿರ್ಧಾರದಿಂದ ಗ್ರೇ ಸ್ಕೇಲ್, ಫಿಡೆಲಿಟಿ ಮತ್ತು ಬ್ಲ್ಯಾಕ್​ ರಾಕ್​ನಂಥ ಸುಮಾರು ಒಂದು ಡಜನ್ ಸ್ಪಾಟ್ ಬಿಟ್​ ಕಾಯಿನ್​ ಇಟಿಎಫ್​ಗಳ ಮೇಲೆ ಗ್ರಾಹಕರಿಗೆ ಹೂಡಿಕೆ ಮಾಡಲು ಸಾಧ್ಯವಾಗಲಿದೆ.

"ನಾವು ಕೆಲ ಸ್ಪಾಟ್ ಬಿಟ್​ಕಾಯಿನ್ ಇಟಿಪಿ ಷೇರುಗಳ ಲಿಸ್ಟಿಂಗ್ ಮತ್ತು ವ್ಯಾಪಾರವನ್ನು ಅನುಮೋದಿಸಿದರೂ, ನಾವು ಬಿಟ್​ಕಾಯಿನ್​ ಅನ್ನು ಅನುಮೋದಿಸುತ್ತಿಲ್ಲ. ಹೂಡಿಕೆದಾರರು ತಾವಾಗಿಯೇ ಬಿಟ್ ​ಕಾಯಿನ್ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಕ್ರಿಪ್ಟೋ ಆಧರಿತ ಮೌಲ್ಯದ ಏರಿಳಿತಗಳ ಬಗ್ಗೆ ಜಾಗರೂಕರಾಗಿರಬೇಕು" ಎಂದು ಎಸ್ಇಸಿ ಅಧ್ಯಕ್ಷ ಗ್ಯಾರಿ ಜೆನ್ಸ್​ಲರ್ ಬುಧವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್​ಇಸಿಯ ಈ ನಿರ್ಧಾರವು ಕ್ರಿಪ್ಟೋ ಆಸ್ತಿ ಸೆಕ್ಯೂರಿಟೀಸ್​ಗಳ ಲಿಸ್ಟಿಂಗ್ ಮಾನದಂಡಗಳನ್ನು ಅನುಮೋದಿಸುವುದಿಲ್ಲ ಜೆನ್ಸ್​ಲರ್ ಹೇಳಿದರು. ಬಿಟ್ ​ಕಾಯಿನ್ ಇಟಿಎಫ್ ಆರಂಭಿಸುವ ಎಲ್ಲಾ ಪ್ರಯತ್ನಗಳನ್ನು ಕಳೆದ 10 ವರ್ಷಗಳಿಂದ ಎಸ್ಇಸಿ ವಿಫಲಗೊಳಿಸಿತ್ತು.

ಕ್ರಿಪ್ಟೋ ಸ್ವತ್ತುಗಳ ಬಹುಪಾಲು ಹೂಡಿಕೆಗಳು ಇನ್ವೆಸ್ಟ್​ಮೆಂಟ್ ಕಾಂಟ್ರ್ಯಾಕ್ಟ್​ ಆಗಿರುವುದರಿಂದ ಇವು ಫೆಡರಲ್ ಸೆಕ್ಯುರಿಟೀಸ್ ಕಾನೂನುಗಳಿಗೆ ಒಳಪಟ್ಟಿರುತ್ತವೆ. ಬಿಟ್ ಕಾಯಿನ್ ಇಟಿಪಿಗಳ ಪ್ರಾಯೋಜಕರು ಉತ್ಪನ್ನಗಳ ಬಗ್ಗೆ ಪೂರ್ಣ, ನ್ಯಾಯಯುತ ಮತ್ತು ಸತ್ಯವಾದ ಮಾಹಿತಿಗಳನ್ನು ಬಹಿರಂಗಪಡಿಸಬೇಕಾಗುತ್ತದೆ.

ಈ ಉತ್ಪನ್ನಗಳನ್ನು ನೋಂದಾಯಿತ ರಾಷ್ಟ್ರೀಯ ಸೆಕ್ಯುರಿಟೀಸ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟಿಂಗ್ ಮಾಡಲಾಗುತ್ತದೆ ಮತ್ತು ಟ್ರೇಡ್ ಮಾಡಲಾಗುತ್ತದೆ. ಅನುಮೋದಿತ ಇಟಿಪಿಗಳ ಖರೀದಿ ಮತ್ತು ಮಾರಾಟಕ್ಕೆ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಡವಳಿಕೆಯ ಮಾನದಂಡಗಳು ಅನ್ವಯವಾಗುತ್ತವೆ.

ಈ ವಾರದ ಆರಂಭದಲ್ಲಿ ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್​ಚೇಂಜ್ ಕಮಿಷನ್‌ನ ಎಕ್ಸ್ ಖಾತೆಯನ್ನು ಕೆಲ ಹೊತ್ತು ಹ್ಯಾಕ್ ಮಾಡಲಾಗಿತ್ತು. ಎಸ್​ಇಸಿಯು ಬಿಟ್ ​ಕಾಯಿನ್ ಎಕ್ಸ್​ಚೇಂಜ್- ಟ್ರೇಡೆಡ್ ಫಂಡ್​ಗಳ (ಇಟಿಎಫ್) ಲಿಸ್ಟಿಂಗ್ ಅನುಮೋದಿಸಿದೆ ಎಂದು ಈ ಸಮಯದಲ್ಲಿ ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ನಂತರ ಸ್ಪಷ್ಟನೆ ನೀಡಿದ್ದ ಜೆನ್ಸ್​ಲರ್, ಏಜೆನ್ಸಿಯ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಸುಳ್ಳು ಪೋಸ್ಟ್ ಮಾಡಲಾಗಿದೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಹೇಳಿದ್ದರು.

ಇದನ್ನೂ ಓದಿ: 2023ರಲ್ಲಿ ಮೊಬೈಲ್​ ಆ್ಯಪ್​ಗಳಲ್ಲಿ ಜನ ಖರ್ಚು ಮಾಡಿದ್ದು 171 ಬಿಲಿಯನ್ ಡಾಲರ್!

ABOUT THE AUTHOR

...view details