ನವದೆಹಲಿ: ದೇಶದಲ್ಲಿ 5ಜಿ ಜಾರಿಯಾದ ಬಳಿಕ ಮೊಬೈಲ್ ರೀಚಾರ್ಜ್ ದರಗಳು ಹೆಚ್ಚುತ್ತಿರುವುದನ್ನು ಕಾಣಬಹುದು. ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಕಳೆದ ವರ್ಷ ತನ್ನ ತಿಂಗಳ ಕನಿಷ್ಠ ರೀಚಾರ್ಜ್ ದರ 99 ರೂ.ಗಳನ್ನು 155 ರೂ.ಗೆ ಏರಿಕೆ ಮಾಡಿ ಶಾಕ್ ನೀಡಿತ್ತು. ಅದನ್ನು ಹರಿಯಾಣ, ಒಡಿಶಾದಲ್ಲಿ ಜಾರಿ ಮಾಡಿದ್ದ ಸಂಸ್ಥೆ ಇದೀಗ ಇನ್ನೂ 7 ರಾಜ್ಯಗಳಲ್ಲಿ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಅನುಷ್ಠಾನಕ್ಕೆ ತರಲಿದೆ.
ಕಳೆದ ವರ್ಷದ ನವೆಂಬರ್ನಲ್ಲಿ ಆರಂಭಿಕ ರೀಚಾರ್ಜ್ ಆದ ತಿಂಗಳ ಅವಧಿಯ 99 ರೂ. ಯೋಜನೆಯನ್ನು 155 ರೂ.ಗೆ ಟೆಲಿಕಾಂ ಸಂಸ್ಥೆ ಹೆಚ್ಚಿಸಿತ್ತು. ಇದನ್ನು ಮೊದಲ ಹಂತದಲ್ಲಿ ಹರಿಯಾಣ ಮತ್ತು ಒಡಿಶಾದಲ್ಲಿ ಮಾತ್ರ ಜಾರಿಗೆ ತಂದಿತ್ತು. ಇಲ್ಲಾಗುವ ಆಗುಹೋಗುಗಳ ಆಧಾರದ ಮೇಲೆ ಅದನ್ನು ಬೇರೆಡೆ ವಿಸ್ತರಿಸಲು ಸಂಸ್ಥೆ ಯೋಜಿಸಿತ್ತು. ಅದರಂತೆ ಗ್ರಾಹಕರು ಹೆಚ್ಚಿನ ಹೊರೆಯ ಯೋಜನೆಗೆ ಹೊಂದಿಕೊಳ್ಳುತ್ತಿದ್ದಾರೆ.
ಹೀಗಾಗಿ ಯೋಜನೆಯನ್ನು ಇದೀಗ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಉತ್ತರ ಪ್ರದೇಶ, ಈಶಾನ್ಯದಲ್ಲಿ ಜಾರಿಗೆ ತಂದಿದೆ. ಅಂದರೆ, ಈ ರಾಜ್ಯಗಳಲ್ಲೀಗ 99 ರೂ.ಗಳ ರೀಚಾರ್ಜ್ ಯೋಜನೆ ಸಿಗುವುದಿಲ್ಲ. ಅದರ ಬದಲಾಗಿ 155 ರೂ. ಯೋಜನೆಯನ್ನೇ ರೀಚಾರ್ಜ್ ಮಾಡಬೇಕು.
ಹೊಸ ದರ ಯೋಜನೆಯ ಸೌಲಭ್ಯವೇನು?:ಮೊದಲಿದ್ದ 99 ರೂ. ರೀಚಾರ್ಜ್ ಯೋಜನೆಯು 28 ದಿನಗಳ ಅವಧಿ, 1 ಜಿಬಿ ಡೇಟಾ, 300 ಸಂದೇಶಗಳು ಮತ್ತು ಪ್ರತಿ ಕರೆಯ ನಿಮಿಷಕ್ಕೆ 2.5 ರೂಪಾಯಿ ಕಟ್ ಆಗುತ್ತಿತ್ತು. 155 ರೂ.ಗೆ ಹೆಚ್ಚಿಸಿದ ಯೋಜನೆಯಲ್ಲಿ ತುಸು ಮಾರ್ಪಾಡು ಮಾಡಲಾಗಿದ್ದು, ಕರೆಗಳನ್ನು ಅನಿಮಿಯತಗೊಳಿಸಲಾಗಿದೆ. ಉಳಿದಂತೆ ಅದೇ ಸೌಲಭ್ಯಗಳು ಮುಂದುವರಿಯಲಿವೆ.