ನವದೆಹಲಿ:ಆಪತ್ಕಾಲಕ್ಕೆ ಆಗಲಿ ಅಂತ ಜನರು ಸಾಮಾನ್ಯವಾಗಿ ಅಲ್ಪಾವಧಿಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಉಳಿತಾಯದ ಪ್ರಮಾಣ ಹಾಗೂ ಅಗತ್ಯಕ್ಕೆ ತಕ್ಕಂತೆ ಹಲವಾರು ವಿಭಿನ್ನ ರೀತಿಯ ಅಲ್ಪಾವಧಿ ಉಳಿತಾಯ ಯೋಜನೆಗಳು ಲಭ್ಯವಿವೆ. ಸಾಮಾನ್ಯವಾಗಿ ಏಳು ದಿನಗಳಿಂದ ಹಿಡಿದು 12 ತಿಂಗಳವರೆಗಿನ ಉಳಿತಾಯ ಯೋಜನೆಗಳನ್ನು ಅಲ್ಪಾವಧಿಯ ಉಳಿತಾಯ ಯೋಜನೆಗಳೆಂದು ಕರೆಯಲಾಗುತ್ತದೆ. ನೀವೂ ಕೂಡ ಅಲ್ಪಾವಧಿಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಇಲ್ಲಿದೆ ಅಂಥ ಉತ್ತಮ ಯೋಜನೆಗಳ ಮಾಹಿತಿ.
ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್: ಫಿಕ್ಸೆಡ್ ಡಿಪಾಸಿಟ್ ಇಡುವುದಾದರೆ ಬ್ಯಾಂಕ್ಗಳ ಸ್ಥಿರ ಠೇವಣಿ ಉಳಿತಾಯ ಯೋಜನೆಗಳು ಉತ್ತಮ ಆಯ್ಕೆಯಾಗಿವೆ. ನೀವು ಇಲ್ಲಿ 7 ದಿನ, 14 ದಿನ, 30 ದಿನ ಮತ್ತು 45 ದಿನಗಳಿಂದ ಹಿಡಿದು ಒಂದು ವರ್ಷ ಅಥವಾ 10 ವರ್ಷಗಳವರೆಗೆ ಬ್ಯಾಂಕಿನಲ್ಲಿ ಎಫ್ಡಿ ಮಾಡಬಹುದು. ಎಫ್ಡಿ ಅವಧಿಯು ಆಯಾ ಬ್ಯಾಂಕಿನ ಮೇಲೆ ಅವಲಂಬಿತವಾಗಿರುತ್ತದೆ. ಎಫ್ಡಿಯ ಮುಕ್ತಾಯ ಅವಧಿ ಪೂರ್ಣಗೊಂಡ ನಂತರ ನೀವು ಹಣವನ್ನು ಹಿಂಪಡೆಯಬಹುದು ಮತ್ತು ಮರುಹೂಡಿಕೆ ಮಾಡಬಹುದು
ಆದಾಗ್ಯೂ, ಕೆಲ ಬ್ಯಾಂಕುಗಳಲ್ಲಿ ಎಫ್ಡಿ ಮುಕ್ತಾಯಗೊಳ್ಳುವ ಮೊದಲು ಹಣವನ್ನು ಹಿಂಪಡೆಯಲು ಅವಕಾಶವಿರುವುದಿಲ್ಲ. ಇನ್ನು ಎಫ್ಡಿ ಮೇಲೆ ನೀಡಲಾಗುವ ಬಡ್ಡಿದರವು ಬ್ಯಾಂಕಿನ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) 7 ದಿನಗಳಿಂದ 1 ವರ್ಷದವರೆಗಿನ ಅವಧಿಯ ಎಫ್ಡಿಗಳ ಮೇಲೆ ಶೇಕಡಾ 3 ರಿಂದ 5.75 ರಷ್ಟು ಬಡ್ಡಿದರವನ್ನು (ರಿಟರ್ನ್) ನೀಡುತ್ತದೆ. ಹಾಗೆಯೇ ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 3 ರಿಂದ 6 ರಷ್ಟು ಬಡ್ಡಿಯನ್ನು ನೀಡುತ್ತದೆ.
ಕಂಪನಿಗಳ ಎಫ್ಡಿ ಯೋಜನೆಗಳು: ಬ್ಯಾಂಕ್ ಎಫ್ಡಿಗಳಿಗೆ ಹೋಲಿಸಿದರೆ ಕಂಪನಿಗಳ ಎಫ್ಡಿ ಯೋಜನೆಗಳು ಹೆಚ್ಚು ಅಪಾಯದ ಅಂಶವನ್ನು ಹೊಂದಿರುತ್ತವೆ. ಒಂದೊಮ್ಮೆ ಎಫ್ಡಿ ಪಡೆದ ಕಂಪನಿಯು ನಷ್ಟಕ್ಕೀಡಾದಲ್ಲಿ ಅದಕ್ಕೆ ಸಾಲ ಕೊಟ್ಟವರು ಅದರ ಸ್ವತ್ತುಗಳ ಮೇಲೆ ಅಂತಿಮ ಹಕ್ಕನ್ನು ಹೊಂದಿರುತ್ತಾರೆ. ಉತ್ಪಾದನಾ ಕಂಪನಿಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ಅಲ್ಪಾವಧಿಯ ಅವಧಿಗೆ ಎಫ್ಡಿ ಯೋಜನೆಗಳನ್ನು ಜಾರಿಗೊಳಿಸುತ್ತವೆ.