ಕೋಲ್ಕತ್ತಾ (ಪಶ್ಚಿಮ ಬಂಗಾಳ): ತಾನು ಏನೇ ಮಾಡಿದರೂ ಸಮಾಜದ ಏಳ್ಗೆಗೆ ಅನುಕೂಲವಾಗಬೇಕು ಎಂಬುದು ಆಕೆಯ ಆಸೆಯಾಗಿತ್ತು. ಇದಕ್ಕಾಗಿ ಆರಂಭದಲ್ಲಿ ಖರ್ಚಿಗಾಗಿ ಒಂದಿಷ್ಟು ದುಡ್ಡು ಹಾಗು ಮಕ್ಕಳಿಗೆ ಸಹಾಯ ಮಾಡಲೆಂದು ಟ್ಯೂಷನ್ ಕೆಲಸ ಶುರು ಮಾಡ್ತಾರೆ. ಈ ಪ್ರಯತ್ನದಲ್ಲಿ ಯಶಸ್ಸು ಕೂಡಾ ಸಿಗುತ್ತದೆ. ಇದರಿಂದ ಕೈ ಸೇರಿದ ಆದಾಯವನ್ನು ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುತ್ತಾ ಇಂದು ನೂರು ಕೋಟಿ ರೂಪಾಯಿಗೂ ಮೀರಿ ವ್ಯವಹಾರ ನಡೆಸುವ ಉದ್ಯಮ ಮುನ್ನಡೆಸುತ್ತಿದ್ದಾರೆ.
ಈ ಯಶಸ್ವಿ ಮಹಿಳೆಯ ಹೆಸರು ತ್ರಿನಾದಾಸ್. ಕೋಲ್ಕತ್ತಾ ನಿವಾಸಿ. ಇವರ ತಂದೆ ಉದ್ಯಮಿ. ಸಮಾಜಕ್ಕೆ ಸಹಾಯ ಮಾಡುವುದನ್ನು ನಾನು ತಂದೆಯನ್ನು ನೋಡಿ ಕಲಿತೆ ಎನ್ನುತ್ತಾರೆ ತ್ರಿನಾ. ತಂದೆ ಪ್ರತೀ ವಾರವೂ ಸಮೀಪದ ಹಳ್ಳಿಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಶಿಕ್ಷಣ, ವೈದ್ಯಕೀಯ ಸೇವೆಗಳನ್ನು ಜನರಿಗೆ ಒದಗಿಸುತ್ತಿದ್ದರು. ತ್ರಿನಾ ಸಹ ತಂದೆಯಂತೆ ಕೈಲಾದಷ್ಟು ಸಹಾಯ ಮಾಡಲು ಶುರು ಮಾಡಿದ್ದಾರೆ.
ಒಂದು ದಿನ ತ್ರಿನಾ ಹತ್ತಿರದ ಹಲ್ದಿಯಾ ಎಂಬ ಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿ ಇಂಟರ್ ಓದುತ್ತಿದ್ದ ಮಕ್ಕಳು ತಮಗೆ ಟ್ಯೂಷನ್ ಹೇಳಿಕೊಡುವಂತೆ ಕೇಳಿದ್ದಾರೆ. ತ್ರಿನಾ ಬಿ.ಟೆಕ್ ಓದಿದವರು. ವಾರಾಂತ್ಯದಲ್ಲಿ ಬಂದು ಮಕ್ಕಳಿಗೆ ಟ್ಯೂಷನ್ ಹೇಳುತ್ತಾ, ಮಕ್ಕಳ ಪೋಷಕರಿಂದ ತನ್ನ ಖರ್ಚಿಗೆಂದು ಸ್ವಲ್ಪ ಫೀಸು ತೆಗೆದುಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಬದಲಾವಣೆ, ಸಂಖ್ಯೆಯೂ ಹೆಚ್ಚತೊಡಗಿತು. ನಂತರದ ದಿನಗಳಲ್ಲಿ 'ಬಿ-ಜೀನಿಯಸ್' ಎಂಬ ಸಂಸ್ಥೆ ಹುಟ್ಟು ಹಾಕಿ ಕೆಲಸ ಮುಂದುವರಿಸಿದರು.
ಒಂದು ವರ್ಷ ಕಳೆಯುತ್ತಿದ್ದಂತೆ ಟ್ಯೂಷನ್ಗೆ ಬೇಡಿಕೆ ಹೆಚ್ಚಾಯ್ತು. ವರ್ಷದಲ್ಲಿ 1,800 ವಿದ್ಯಾರ್ಥಿಗಳು ಇವರ ಟ್ಯೂಷನ್ಗೆ ಬರಲು ಶುರು ಮಾಡಿದರು. ಇದಕ್ಕಾಗಿ ಕೆಲವು ಶಿಕ್ಷಕರನ್ನೂ ನೇಮಿಸಿದರು. ಇದೆಲ್ಲ ನಡೆದಿದ್ದು 2012ರಲ್ಲಿ. ತಿಂಗಳಿಗೆ 8-10 ಲಕ್ಷ ರೂಪಾಯಿ ಸಂಪಾದನೆ ಕೈ ಸೇರುತ್ತಿತ್ತು. ಇತರ ಹಳ್ಳಿ ಮತ್ತು ಪಟ್ಟಣಗಳಲ್ಲಿ ಫ್ರಾಂಚೈಸಿಗಳನ್ನು ಸ್ಥಾಪಿಸಿದ ತ್ರಿನಾ ಮೂರು ವರ್ಷಗಳಲ್ಲಿ ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ನೇಪಾಳದಂತಹ 8 ದೇಶಗಳಿಗೆ ಸೇವೆ ವಿಸ್ತರಿಸಿದರು. 2016ರಲ್ಲಿ ಎಬೋಲಾ ಕಾಯಿಲೆಯಿಂದ ಆಫ್ರಿಕಾ ಖಂಡದ ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಆಗ ಅಲ್ಲಿನ ಮಕ್ಕಳಿಗೆ ಉಚಿತವಾಗಿ ಬೋಧನೆ ಮುಂದುವರಿಸುತ್ತಾರೆ. ಇದಕ್ಕಾಗಿ ತ್ರಿನಾ ಜಾಗತಿಕ ವಿದ್ಯಾರ್ಥಿ ಉದ್ಯಮಿ ಎಂಬುದೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದರು.