ಗುವಾಹಟಿ (ಅಸ್ಸೋಂ):ಅಸ್ಸೋಂ ತನ್ನ ವಿಶಿಷ್ಟ ರುಚಿಕರವಾದ ಟೀಗೆ ಪ್ರಸಿದ್ದ. ಇಲ್ಲಿನ ಟೀಗೆ ಮನಸೋಲದ ಚಹಾ ಪ್ರಿಯರಿಲ್ಲ. ಈ ಬಾರಿ ಇದೇ ರಾಜ್ಯ ತನ್ನ ಟೀ ಪುಡಿ ಮಾರಾಟದಲ್ಲಿ ಮತ್ತೆ ದಾಖಲೆ ಬರೆದಿದೆ. ಹೌದುಗುವಾಹಟಿ ಟೀ ಹರಾಜು ಕೇಂದ್ರದಲ್ಲಿ 2022-2023ರ ಹಣಕಾಸು ವರ್ಷದಲ್ಲಿ ರೂ 3,300 ಕೋಟಿಗೂ ಹೆಚ್ಚು ಮೌಲ್ಯದ ಅಸ್ಸೋಂ ಚಹಾ ಪುಡಿ (ಟೀ) ಮಾರಾಟವಾಗಿದೆ ಎಂದು ಗುವಾಹಟಿ ಟೀ ಹರಾಜು ಕೇಂದ್ರದ ಅಧಿಕೃತ ಮಾಹಿತಿ ನೀಡಿದೆ.
ಗುವಾಹಟಿ ಟೀ ಹರಾಜು ಕೇಂದ್ರದ ಅಧಿಕೃತ ಮಾಹಿತಿಯ ಪ್ರಕಾರ, 2022-23ರ ಅವಧಿಯ ಚಹಾ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿ ಪುಡಿಗೆ 191.26 ರೂವಿನಂತೆ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ ಮಾಡಲಾಗಿದೆ.
ಗುವಾಹಟಿ ಟೀ ಹರಾಜು ಖರೀದಿದಾರರ ಸಂಘದ (ಜಿಟಿಎಬಿಎ) ಕಾರ್ಯದರ್ಶಿ ದಿನೇಶ್ ಬಿಹಾನಿ ಈ ಕುರಿತು ಮಾಹಿತಿ ನೀಡಿದ್ದಾರೆ. 2022-23 ರ ವರ್ಷದಲ್ಲಿ 3,300 ಕೋಟಿ ಮೌಲ್ಯದ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿಯನ್ನು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಮಾರಾಟ ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಾಜಿನ ಸರಾಸರಿ ಬೆಲೆ ಪ್ರತಿ ಕೆಜಿಗೆ 8.10 ರೂ.ವರೆಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ವಿಶೇಷ ಟೀ ಮನೋಹರಿ ಗೋಲ್ಡನ್ ಟೀ ಕೆಜಿಗೆ 99,999 ರೂ.ಗೆ ಹರಾಜಾಗಿತ್ತು. ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಸಾಂಪ್ರದಾಯಿಕ ಚಹಾ ಪುಡಿ ಸುಮಾರು 5,100 ರೂ.ಗೆ ಹರಾಜು ಮಾಡಲಾಗಿದೆ. ಹಾಗೆ ಜಾಗತಿಕ ಮಟ್ಟದಲ್ಲಿ ಅಸ್ಸೋಂ ಚಹಾಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ, ರಫ್ತುದಾರರ ಬೇಡಿಕೆಗಳು ಕೂಡ ಹೆಚ್ಚಾಗಿವೆ.