ಹೈದರಾಬಾದ್ (ತೆಲಂಗಾಣ):ಸಂಬಂಧದಲ್ಲಿಪತಿ-ಪತ್ನಿಯರಾದರೂ ಅವರ ನಡುವಿನ ಬಾಂಧವ್ಯ ಆಪ್ತ ಸ್ನೇಹಿತರಂತಿರುತ್ತದೆ. ಪರಸ್ಪರರ ನಡುವೆ ಅಂಥದ್ದೊಂದು ಅತ್ಯುತ್ತಮ ಬೆಂಬಲ ವ್ಯವಸ್ಥೆಯನ್ನು ಇಬ್ಬರೂ ಹೊಂದಿರುತ್ತಾರೆ. ಈ ಮಾತು ಅಂಜಲಿ ಪಿಚೈ ಮತ್ತು ಸುಂದರ್ ಪಿಚೈ ಚೆನ್ನಾಗಿ ಬಲ್ಲರು. ಸುಂದರ್ ಪಿಚೈ ಜಾಗತಿಕ ಸರ್ಚ್ ಎಂಜಿನ್ ದೈತ್ಯ ಕಂಪನಿ ಗೂಗಲ್‌ನ ಸಿಇಒ. ಆದರೆ ಅಂಜಲಿ ಪಿಚೈ ಬಗ್ಗೆ ಹೆಚ್ಚಿನವರಿಗೆ ಹೆಚ್ಚೇನೂ ತಿಳಿದಿಲ್ಲ. ಸುಂದರ್ ಅವರ ವೃತ್ತಿಜೀವನವನ್ನು ಭದ್ರಪಡಿಸುವಲ್ಲಿ ಅಂಜಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂಬುದು ಗಮನಾರ್ಹ.
ಜನವರಿ 11, 1971 ರಂದು ರಾಜಸ್ಥಾನದ ಕೋಟಾದಲ್ಲಿ ಅಂಜಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಕೋಟಾದಲ್ಲಿಯೇ ಮುಗಿಸಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್ಗಾಗಿ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದರು. ಐಐಟಿಯಲ್ಲಿ ಅವರು ಸುಂದರ್ ಪಿಚೈ ಅವರನ್ನು ಭೇಟಿಯಾದರು. ಮೊದಲ ವರ್ಷದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರು ಮದುವೆಯಾಗಲು ನಿರ್ಧರಿಸಿದರು. ದಂಪತಿಗೆ ಈಗ ಕಾವ್ಯ ಎಂಬ ಮಗಳು ಮತ್ತು ಕಿರಣ್ ಎಂಬ ಮಗ ಇದ್ದಾರೆ. ತಮ್ಮ ಬದುಕಿನ ಕಷ್ಟ-ಸುಖದ ಬಗ್ಗೆ ಸುಂದರ್ ಅವರು ಕಾರ್ಯಕ್ರಮವೊಂದರಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.
"ನಾನು ಈ ಮಟ್ಟಕ್ಕೆ ಬೆಳೆಯಲು ಅಂಜಲಿಯೇ ಕಾರಣ. ನಾವು ಮೊದಲು ಭೇಟಿಯಾದದ್ದು ಐಐಟಿ ಖರಗ್‌ಪುರದಲ್ಲಿ. ತುಂಬಾ ಬ್ಯುಸಿಯಾಗಿದ್ದ ನನ್ನನ್ನು ಬದಲಾಯಿಸಿದ್ದು ಅವಳೇ. ಅವಳಿಗೆ ಪ್ರಪೋಸ್ ಮಾಡುವಾಗ ನನ್ನ ಟೆನ್ಶನ್ ಆಕಾಶಕ್ಕೆ ತಲುಪಿತ್ತು. ಅಂಜಲಿಗೆ ನನ್ನ ಮನಸ್ಸಿನಲ್ಲಿರುವ ಮಾತು ಹೇಳುವುದಕ್ಕಿಂತಲೂ ಗೂಗಲ್‌ನಲ್ಲಿ ಈ ಸ್ಥಾನವನ್ನು ಪಡೆಯುವುದೇ ನನಗೆ ಸುಲಭವಾಗಿತ್ತು" ಎಂದು ಸುಂದರ್ ಪಿಚೈ ತಮ್ಮ ಪ್ರೇಮಕಥೆ ಹೇಳುತ್ತಾರೆ.
"ಆ ಸಂದರ್ಭದಲ್ಲಿ ನಾನು ಆರ್ಥಿಕವಾಗಿ ಸ್ಥಿರವಾಗಿಲ್ಲದಿದ್ದರೂ ಅಂಜಲಿ ನನ್ನನ್ನು ನಂಬಿದ್ದಳು. ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದೇ ಆಕೆಯ ದೊಡ್ಡತನ. ಬಿ.ಟೆಕ್ ನಂತರ ಮಾಸ್ಟರ್ಸ್ ಮಾಡಲು ಅಮೆರಿಕಕ್ಕೆ ಹೋಗಿದ್ದೆ. ಆಗ ಅಂಜಲಿ ವ್ಯಾಪಾರ ವಿಶ್ಲೇಷಕರಾಗಿ ಆಕ್ಸೆಂಚರ್ನಲ್ಲಿ ಕೆಲಸಕ್ಕೆ ಸೇರಿದರು. ಅಮೆರಿಕದಿಂದ ಕರೆ ಮಾಡುವುದು ತುಂಬಾ ದುಬಾರಿಯಾಗಿತ್ತು. ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ಆರು ತಿಂಗಳ ಕಾಲ ನಾವು ಮಾತನಾಡಿಯೇ ಇರಲಿಲ್ಲ. ಆ ಅಂತರ ನಮ್ಮ ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸಿತು. ನಾನು ಕೆಲಸಕ್ಕೆ ಸೇರಿದ ನಂತರ ಆಕೆಯ ಚಿಕ್ಕಪ್ಪನ ಅನುಮತಿ ಪಡೆದು ನಾವಿಬ್ಬರು ಮದುವೆಯಾದೆವು" ಎಂದು ಪಿಚೈ ವಿವರಿಸಿದ್ದಾರೆ.