ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಇಂಧನ ರಫ್ತು ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಹೀಗಾಗಿ, ರಷ್ಯಾದಿಂದ ತೈಲ ಆಮದು ಕಡಿಮೆಯಾಗಿದೆ. ಇದರೊಂದಿಗೆ ಐರೋಪ್ಯ ರಾಷ್ಟ್ರಗಳ ಇಂಧನ ಅಗತ್ಯವನ್ನು ಭಾರತ ಪೂರೈಸುತ್ತಿದೆ. ಈ ಅವಧಿಯಲ್ಲಿ ಐರೋಪ್ಯ ರಾಷ್ಟ್ರಗಳಿಗೆ ಭಾರತ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೆಪ್ಲರ್ ವರದಿ ಹೇಳಿದೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಈ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಆನಂದ್ ಮಹೀಂದ್ರಾ ಭಾನುವಾರ ಟ್ವೀಟ್ ಮಾಡಿದ್ದು, "ಬೂಟಾಟಿಕೆಯ ಬೆಲೆ ಹೆಚ್ಚಾಗಿದೆ. ಭಾರತವು ಮೊದಲಿನಿಂದಲೂ ತನ್ನ ವ್ಯವಹಾರದಲ್ಲಿ ಪಾರದರ್ಶಕವಾಗಿದೆ" ಎಂದು ಬರೆದಿದ್ದಾರೆ. ಈ ಟ್ವೀಟ್ ಅನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಟ್ವೀಟ್‌ನಲ್ಲಿ ಮಹೀಂದ್ರಾ ಹಂಚಿಕೊಂಡಿರುವ ವರದಿಯು ಬ್ಲೂಮ್‌ಬರ್ಗ್ ವಿಶ್ಲೇಷಣೆ ಹೊಂದಿದೆ. ರಷ್ಯಾದ ತೈಲವು ಇನ್ನೂ ಭಾರತದ ಸಹಾಯದಿಂದ ಯುರೋಪಿನ ಕಾರುಗಳಿಗೆ ಶಕ್ತಿ ನೀಡುತ್ತದೆ. ಭಾರತವು ಅಗ್ಗದ ರಷ್ಯಾದ ಕಚ್ಚಾ ತೈಲವನ್ನು ಡೀಸೆಲ್ ರೀತಿಯ ಇಂಧನವಾಗಿ ಪರಿವರ್ತಿಸಿದೆ. ಅದನ್ನು ಯುರೋಪ್‌ಗೆ ರವಾನಿಸಿದೆ ಎಂದು ಹೇಳಿದೆ. ಮೊಟ್ಟಮೊದಲ ಬಾರಿಗೆ ಸೌದಿ ಅರೇಬಿಯಾವನ್ನು ಭಾರತ ಪಕ್ಕಕ್ಕೆ ತಳ್ಳಿದ್ದು, ಪ್ರತಿದಿನ ಯೂರೋಪ್ಗೆ 3 ಲಕ್ಷ 60 ಸಾವಿರ ಬ್ಯಾರೆಲ್ ತೈಲ ರಫ್ತು ಮಾಡುತ್ತಿದೆ.
ರಷ್ಯಾದಿಂದ ತೈಲ ಆಮದು ಸ್ಥಗಿತಗೊಂಡಿರುವುದರಿಂದ ಯುರೋಪ್ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ, ರಷ್ಯಾದಿಂದ ನೇರವಾಗಿ ಆಮದು ಮಾಡಿಕೊಂಡರೆ ಕಡಿಮೆ ಬೆಲೆಗೆ ತೈಲ ಸಿಗುತ್ತಿತ್ತು. ಆದರೆ ಈಗ ಆ ಪರಿಸ್ಥಿತಿಗಳು ಯುರೋಪಿಯನ್ ರಿಫೈನರ್‌ಗಳನ್ನು ವ್ಯಾಪಾರದಿಂದ ಹೊರಹಾಕಿವೆ. ಭಾರತದಂತಹ ದೂರದ ದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿದೆ. ರಷ್ಯಾವನ್ನು ಬದಿಗೊತ್ತಿರುವ ಯುರೋಪಿಯನ್ ರಿಫೈನರ್‌ಗಳಿಗೆ ತೈಲ ಎಲ್ಲಿ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ರಷ್ಯಾದಿಂದ ಭಾರತ ದಾಖಲೆ ಮಟ್ಟದಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಏಪ್ರಿಲ್‌ನಲ್ಲಿ ಭಾರತ ಕಡಿಮೆ ದರದಲ್ಲಿ ದಿನಕ್ಕೆ 20 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಅಂದರೆ ಒಟ್ಟು ಆಮದಿನ ಶೇಕಡಾ 44ರಷ್ಟು ತೈಲವನ್ನು ರಷ್ಯಾವೊಂದರಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆದಾರನಾಗಿ ರಷ್ಯಾ ಹೊರಹೊಮ್ಮಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳಲು ಹಲವು ದೇಶಗಳು ಸಲಹೆ ನೀಡಿದ್ದರೂ, ಇಂಧನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತವು ತೈಲವನ್ನು ಹೆಚ್ಚು ಖರೀದಿಸುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ, ರಷ್ಯಾದಿಂದ 3.35 ಶತಕೋಟಿ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. ಸೌದಿ ಅರೇಬಿಯಾದಿಂದ 2.30 ಶತಕೋಟಿ ಡಾಲರ್ ಮತ್ತು ಇರಾಕ್ನಿಂದ 2.03 ಶತಕೋಟಿ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕೆಪ್ಲರ್ ವರದಿ ಮಾಡಿದೆ.
ಇದನ್ನೂ ಓದಿ:ಇಡೀ ಯುರೋಪ್‌ಗೆ ಅತ್ಯಧಿಕ ಸಂಸ್ಕರಿತ ತೈಲ ಪೂರೈಕೆದಾರನಾದ ಭಾರತ