ಮುಂಬೈ:ಜಿಯೋ ಮೂಲಕ ಎಲ್ಲರ ಮನೆಮಾತಾಗಿರುವ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಕಂಪನಿಯ ಅಧಿಕಾರವನ್ನು ತಮ್ಮ ಮಕ್ಕಳ ಕೈಗೆ ನೀಡಲು ಅಂತಿಮ ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷವಷ್ಟೇ ಆಕಾಶ್ ಅಂಬಾನಿಯನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಿದ್ದರು. ಇದೀಗ ಇನ್ನಿಬ್ಬರು ಮಕ್ಕಳಾದ ಇಶಾ ಮತ್ತು ಅನಂತ್ ಅಂಬಾನಿಯನ್ನೂ ಕಂಪನಿಗೆ ನೇಮಕ ಮಾಡಲಾಗಿದೆ.
ಅಂಬಾನಿ ಪುತ್ರರಾದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ಅವರನ್ನು ಸೋಮವಾರ ಎನರ್ಜಿ ಟು ಟೆಕ್ನಾಲಜಿ ಕಾಂಗ್ಲೋಮೆರೇಟ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಂಡಳಿಯಲ್ಲಿ ನೇಮಿಸಲಾಗಿದೆ. ಇದು ಅಧಿಕಾರ ಹಸ್ತಾಂತರದ ಮೊದಲ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.
ಸೋಮವಾರ ನಡೆದ ರಿಲಯನ್ಸ್‌ನ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಳಿ ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅವರನ್ನು 'ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರು' ಆಗಿ ನೇಮಿಸಿ ಅನುಮೋದಿಸಲಾಗಿದೆ ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರದಲ್ಲಿ ತಿಳಿಸಿದೆ.
ಆಕಾಶ್ ಅಂಬಾನಿ ಜಿಯೋ ಇನ್ಫೋಕಾಮ್ ಅಧ್ಯಕ್ಷ:ಕಳೆದ ವರ್ಷ ಉದ್ಯಮಿ ಮುಖೇಶ್ ಅಂಬಾನಿ ಅವರು ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿಗೆ ಭಾರತದ ಅತಿದೊಡ್ಡ ಮೊಬೈಲ್ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಿದ್ದರು. ಇದೀಗ ಇನ್ನಿಬ್ಬರು ಮಕ್ಕಳಿಗೂ ಕಂಪನಿಯಲ್ಲಿ ದೊಡ್ಡ ಹುದ್ದೆ ನೀಡಲಾಗಿದೆ.