ನವದೆಹಲಿ: ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಲ್ಲಿ 3 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಸೋಮವಾರ ತಿಳಿಸಿದೆ. ಏಷ್ಯಾ ಪೆಸಿಫಿಕ್ (ಎಪಿಎಸಿ) ನಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗೆ ಕಂಪನಿಯು ನಿಗದಿಪಡಿಸಿದ 15 ಮಿಲಿಯನ್ ಡಾಲರ್ ನಿಧಿಯ ಭಾಗವಾಗಿ ಈ ಹೂಡಿಕೆ ಮಾಡಲಾಗುವುದು. ಭಾರತದಲ್ಲಿ ಪ್ರಕೃತಿ ಆಧಾರಿತ ಯೋಜನೆಗಳಿಗಾಗಿ ನಿಧಿಯ ಎಪಿಎಸಿ ಪಾಲಿನ ಮೊದಲ 3 ಮಿಲಿಯನ್ ಡಾಲರ್ ಬಳಸಲಾಗುವುದು ಎಂದು ಅಮೆಜಾನ್ ಹೇಳಿದೆ.
"ತನ್ನ ಮೊದಲ ಯೋಜನೆಯ ಭಾಗವಾಗಿ ಅಮೆಜಾನ್ ಪಶ್ಚಿಮ ಘಟ್ಟಗಳಲ್ಲಿ ಸಮುದಾಯಗಳು ಮತ್ತು ಪರಿಸರ ಸಂರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ (ಸಿಡಬ್ಲ್ಯೂಎಸ್) ನೊಂದಿಗೆ ಕೆಲಸ ಮಾಡಲಿದೆ. ಪಶ್ಚಿಮ ಘಟ್ಟಗಳು ವಿಶ್ವದ ಅತಿದೊಡ್ಡ ಕಾಡು ಪ್ರದೇಶ ಹೊಂದಿದ್ದು, ಏಷ್ಯಾದ ಆನೆ, ಹುಲಿಗಳು ಸೇರಿದಂತೆ ಭಾರತದ ಎಲ್ಲ ವನ್ಯಜೀವಿ ಪ್ರಭೇದಗಳ ಪೈಕಿ ಶೇಕಡಾ 30 ಕ್ಕಿಂತ ಹೆಚ್ಚು ಪ್ರಭೇದಗಳಿಗೆ ಇದು ನೆಲೆಯಾಗಿದೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ವೈಲ್ಡ್ ಕಾರ್ಬನ್ ಹೆಸರಿನ ಯೋಜನೆಯನ್ನು ಆರಂಭಿಸಲು ಸಿಡಬ್ಲ್ಯೂಎಸ್ ಗೆ ಅಮೆಜಾನ್ 1 ಮಿಲಿಯನ್ ಡಾಲರ್ ನೆರವು ನೀಡಲಿದೆ. ವೈಲ್ಡ್ ಕಾರ್ಬನ್ ಯೋಜನೆಯಡಿ 10 ಸಾವಿರ ಸಂಖ್ಯೆಯ ಹಣ್ಣು ಬಿಡುವ, ಮರಮುಟ್ಟು ಮತ್ತು ಔಷಧೀಯ ಮರಗಳನ್ನು ನೆಡಲು ಮತ್ತು ನಿರ್ವಹಿಸಲು ರೈತರಿಗೆ ಸಹಾಯ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. "ಏಷ್ಯಾ-ಪೆಸಿಫಿಕ್ ಪ್ರದೇಶವು ವಿಶಾಲವಾದ ಕಾಡು ಮತ್ತು ಕರಾವಳಿ ಪರಿಸರಗಳಿಗೆ ನೆಲೆಯಾಗಿದೆ. ಆದರೆ, ಇದು ಹವಾಮಾನ ಬದಲಾವಣೆ, ಜೀವವೈವಿಧ್ಯ ನಷ್ಟ ಮತ್ತು ಭೂ ಸವಕಳಿಯಿಂದ ಹಾನಿಗೀಡಾಗುತ್ತಿದೆ." ಎಂದು ಅಮೆಜಾನ್ ಹೇಳಿದೆ.