ಸ್ಯಾನ್ ಫ್ರಾನ್ಸಿಸ್ಕೊ: ಅಮೆಜಾನ್ ಡಾಟ್ ಕಾಂ ಈ ವಾರ ಕಂಪನಿಯಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಂಪನಿಯು ತನ್ನ ಡಿವೈಸ್ ವಿಭಾಗ, ರಿಟೇಲ್ ವಿಭಾಗ ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಇನ್ನು ಕೆಲ ವಿಭಾಗಗಳಲ್ಲಿ ಕೆಲ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ದತ್ತಾಂಶ ವಿಜ್ಞಾನಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮತ್ತು ಇತರ ಕಾರ್ಪೊರೇಟ್ ಉದ್ಯೋಗಿಗಳು ಕೆಲಸ ಮಾಡುವ ವಿವಿಧ ಸೌಲಭ್ಯಗಳಲ್ಲಿನ ಸುಮಾರು 260 ಕಾರ್ಮಿಕರನ್ನು ವಜಾಗೊಳಿಸುವುದಾಗಿ ತಿಳಿಸಿತ್ತು. ಈ ಉದ್ಯೋಗ ಕಡಿತಗಳು ಜನವರಿ 17 ರಿಂದ ಜಾರಿಗೆ ಬರಲಿವೆ ಎಂದು ತಿಳಿದು ಬಂದಿದೆ.
ಆಳವಾದ ವಿಮರ್ಶೆಗಳ ನಂತರ, ನಾವು ಇತ್ತೀಚೆಗೆ ಕೆಲವು ಟೀಂಗಳನ್ನು ಹಾಗೂ ಈಗಾಗಲೇ ಇರುವ ಪ್ಲಾನ್ನಂತೆ ಒಟ್ಟುಗೂಡಿಸಲು ನಿರ್ಧರಿಸಿದ್ದೇವೆ. ಕೆಲ ಹುದ್ದೆಗಳು ಕಂಪನಿಗೆ ಇನ್ಮುಂದೆ ಅಗತ್ಯವಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಡಿವೈಸಸ್ ಮತ್ತು ಸರ್ವಿಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಡೇವ್ ಲಿಂಪ್ ಬ್ಲಾಗ್ ಪೋಸ್ಟ್‌ನಲ್ಲಿ ನವೆಂಬರ್ 16 ರಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.