ನವದೆಹಲಿ : ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್, ಫ್ಲಿಪ್ಕಾರ್ಟ್, ಮಿಂತ್ರಾ ಮತ್ತು ಇತರ ಕಂಪನಿಗಳು ಭಾನುವಾರದಿಂದ ಭಾರತದಲ್ಲಿ ಹಬ್ಬದ ಋತುವಿನ ಮಾರಾಟ ಪ್ರಾರಂಭಿಸಿವೆ. ಈ ಹಬ್ಬದ ಸೀಸನ್ನಲ್ಲಿ ಇವು ಒಟ್ಟಾರೆಯಾಗಿ 90 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆಯಿದೆ. ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ರೆಡ್ ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಪ್ರಕಾರ, ಸುಮಾರು 140 ಮಿಲಿಯನ್ನಷ್ಟಿರುವ ಆನ್ ಲೈನ್ ಮಾರಾಟಗಾರರು, ಅದರಲ್ಲೂ ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ವರ್ಷದಿಂದ ವರ್ಷಕ್ಕೆ ಹಬ್ಬದ ಮಾರಾಟದಲ್ಲಿ ಕನಿಷ್ಠ 15 ಪ್ರತಿಶತದಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಸರಾಸರಿ ಮಾರಾಟ ಬೆಳವಣಿಗೆ ಶೇಕಡಾ 26 ರಷ್ಟಾಗಬಹುದು ಎಂದು ವರದಿಗಳು ತಿಳಿಸಿವೆ.
ಅಮೆಜಾನ್ ಇಂಡಿಯಾ ಹಬ್ಬದ ಋತುವಿನಲ್ಲಿ ತನ್ನ ಜಾಲದಲ್ಲಿ 1,00,000 ಕ್ಕೂ ಹೆಚ್ಚು ಸೀಸನಲ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಲಕ್ನೋ ಮತ್ತು ಚೆನ್ನೈನಂತಹ ನಗರಗಳಲ್ಲಿ ನೇಮಕ ಮಾಡಿಕೊಳ್ಳಲಾದ ನೇರ ಮತ್ತು ಪರೋಕ್ಷ ಉದ್ಯೋಗಗಳು ಇದರಲ್ಲಿ ಸೇರಿವೆ. ಮಿಂತ್ರಾದ ಬಿಗ್ ಫ್ಯಾಷನ್ ಫೆಸ್ಟಿವಲ್ ಈಗ 6,000 ಕ್ಕೂ ಹೆಚ್ಚು ಪ್ರಮುಖ ಅಂತರರಾಷ್ಟ್ರೀಯ, ದೇಶೀಯ ಮತ್ತು ಡಿ 2 ಸಿ ಬ್ರಾಂಡ್ ಗಳ 23 ಲಕ್ಷಕ್ಕೂ ಹೆಚ್ಚು ಫ್ಯಾಷನ್, ಸೌಂದರ್ಯ ಮತ್ತು ಲೈಫ್ ಸ್ಟೈಲ್ ಉತ್ಪನ್ನಗಳೊಂದಿಗೆ ಲೈವ್ ಆಗಿದೆ.
ಸ್ನ್ಯಾಪ್ ಡೀಲ್ ಕೂಡ ಅಕ್ಟೋಬರ್ 8 ರಿಂದ 15 ರವರೆಗೆ 'ತೂಫಾನಿ ಸೇಲ್-ಫೆಸ್ಟಿವ್ ಧಮಾಕಾ' ಎಂಬ ಹಬ್ಬದ ಋತುವಿನ ಮೊದಲ ಮಾರಾಟವನ್ನು ಪ್ರಾರಂಭಿಸಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್ಸಂಗ್ ಬಹುನಿರೀಕ್ಷಿತ ಹಬ್ಬದ ಋತುವಿನಲ್ಲಿ ತನ್ನ ವ್ಯಾಪಕ ಶ್ರೇಣಿಯ ಟೆಲಿವಿಷನ್ಗಳ ಭಾರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ.