ನ್ಯೂಯಾರ್ಕ್ (ಅಮೆರಿಕ):ಕಳೆದ ಕೆಲವು ತಿಂಗಳುಗಳ ಹಿಂದೆ ಜಗತ್ತಿನ ದೈತ್ಯ ಕಂಪನಿಗಳಲ್ಲಲ್ಲೊಂದಾದ ಅಮೆಜಾನ್ 18,000 ಉದ್ಯೋಗಿಗಳನ್ನು ಕಡಿತ ಮಾಡಿತ್ತು. ಈಗ ಮತ್ತೆ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಪ್ರಸ್ತುತ 9,000ಕ್ಕೂ ಹೆಚ್ಚು ಕಾರ್ಪೊರೇಟ್ ಮತ್ತು ತಂತ್ರಜ್ಞಾನ ವಿಭಾಗದ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ.
ಅಮೆಜಾನ್ ಸಿಇಒ ಹೇಳಿದ್ದೇನು?: "ಕಳೆದ ವಾರ ನಾವು ನಮ್ಮ ಆಪರೇಟಿಂಗ್ ಪ್ಲಾನ್(ಓಪಿ2)ನ ಎರಡನೇ ಹಂತ ಮುಕ್ತಾಯಗೊಳಿಸಿದ್ದು, ಮುಂದಿನ ಕೆಲವು ವಾರಗಳಲ್ಲಿ 9,000 ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಲು ಉದ್ದೇಶಿಸಿದ್ದೇವೆ. ಎಡಬ್ಲ್ಯೂಎಸ್, ಪಿಎಕ್ಸ್ಟಿ, ಜಾಹೀರಾತು ಮತ್ತು ಟ್ವಿಚ್ನಲ್ಲಿ ಕೆಲಸ ಮಾಡುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕಲಾಗುವುದು. ಇದು ಅತ್ಯಂತ ಕಠಿಣ ನಿರ್ಧಾರ. ಆದರೆ, ಈ ಪ್ರಕ್ರಿಯೆ ಕಂಪನಿಯ ದೀರ್ಘಾವಧಿಗೆ ಉತ್ತಮವೆಂದು ನಾವು ಭಾವಿಸುತ್ತೇವೆ'' ಎಂದು ಅಮೆಜಾನ್ ಸಿಇಒ ಆ್ಯಂಡಿ ಜಸ್ಸಿ ಹೇಳಿದ್ದಾರೆ.
''ಏಪ್ರಿಲ್ ಮಧ್ಯಭಾಗದಿಂದ ಅಂತ್ಯದ ವೇಳೆಗೆ 9,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯ ಪೂರ್ಣಗೊಳ್ಳಲಿವೆ. ಕಳೆದ ವರ್ಷ ನವೆಂಬರ್‌ನಿಂದ ಕಂಪನಿಯು ಬೃಹತ್ ಸಂಖ್ಯೆಯ ಅಂದ್ರೆ, 18,000 ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಅನಿಶ್ಚಿತ ಆರ್ಥಿಕತೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ನಮ್ಮ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಹೆಡ್‌ಕೌಂಟ್‌ನಲ್ಲಿ ಹೆಚ್ಚು ಸುವ್ಯವಸ್ಥೆಗಾಗಿ ಈ ನಿರ್ಧಾರ ಆಯ್ಕೆ ಮಾಡಿಕೊಂಡಿದ್ದೇವೆ'' ಎಂದು ಜಸ್ಸಿ ತಿಳಿಸಿದ್ದಾರೆ.
ಉದ್ಯೋಗ ಕಡಿತಕ್ಕೆ ಕಾರಣವೇನು?: ಜಾಗತಿಕ ಆರ್ಥಿಕ ಅನಿಶ್ಚಿತತೆಯ ಮಧ್ಯೆ ತಂತ್ರಜ್ಞಾನ ದೈತ್ಯ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್ ಹಾಗೂ ಫೇಸ್‌ಬುಕ್ ಕಳೆದ ಕೆಲವು ತಿಂಗಳುಗಳಲ್ಲಿ ಭಾರಿ ಮಟ್ಟದ ಉದ್ಯೋಗ ಕಡಿತ ಘೋಷಿಸಿವೆ. ಕೋವಿಡ್ ಸಾಂಕ್ರಾಮಿಕ ವರ್ಷಗಳಲ್ಲಿ ಡಿಜಿಟಲ್ ಬಳಕೆಯು ಗಗನಕ್ಕೇರಿತ್ತು. ಕಂಪನಿಗಳು ಪೋರ್ಟ್ಫೋಲಿಯೊಗಳನ್ನು ವೈವಿಧ್ಯಮಯಗೊಳಿಸಲು ನೇಮಕಾತಿ ಹೆಚ್ಚಿಸಲಾಗಿತ್ತು. ಆದರೆ, ಕೋವಿಡ್ ರೋಗದ ನಂತರ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ ಗ್ರಾಹಕರ ಬದಲಾದ ಮನಸ್ಥಿತಿ ಕಂಪನಿಗಳ ಪುನರ್‌ರಚನೆ ಮತ್ತು ವೆಚ್ಚ ಕಡಿತಕ್ಕೆ ಕಾರಣವಾಗುತ್ತಿದೆ.