ನವದೆಹಲಿ: ದೇಶದಲ್ಲಿ 5ಜಿ ಸೇವೆ ಆರಂಭವಾಗಿ ಒಂದು ವರ್ಷವಾಗಿದೆ. ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂ ಸಂಸ್ಥೆಗಳು ಮಾತ್ರ ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಸೇವೆಗಳನ್ನು ನೀಡುತ್ತಿವೆ. 5ಜಿ ನೆಟ್‌ವರ್ಕ್ ಹೊಂದಿರುವ ಪ್ರದೇಶಗಳಲ್ಲಿ 5ಜಿ ಮೊಬೈಲ್ ಇರುವವರಿಗೆ ಡೇಟಾ ಸೇವೆಗಳನ್ನು ಉಚಿತವಾಗಿಯೇ ನೀಡಲಾಗುತ್ತಿದೆ. ಡೇಟಾ ಬಳಕೆಗೂ ಯಾವುದೇ ನಿರ್ಬಂಧವಿಲ್ಲ. ಆದರೆ ನೀವು ಈ ಸೇವೆಗಳನ್ನು ಇನ್ನು ಕೆಲವೇ ದಿನಗಳ ಕಾಲ ಮಾತ್ರ ಉಚಿತವಾಗಿ ಬಳಸಬಹುದಾದ ಸಾಧ್ಯತೆ ಗೋಚರಿಸಿದೆ.
ಈ ಎರಡೂ ಟೆಲಿಕಾಂ ಕಂಪನಿಗಳು 5ಜಿ ಸೇವೆಗಳಿಗೆ ಶುಲ್ಕ ವಿಧಿಸಲಿವೆ. ಈ ವರ್ಷದ ದ್ವಿತೀಯಾರ್ಧದಿಂದ ಶುಲ್ಕ ಸಂಗ್ರಹಿಸುವ ಯೋಜನೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹಾಗಾಗಿ, ಇನ್ನು ಮುಂದೆ 4ಜಿ ಸೇವೆಗಳಿಗೆ ಹೋಲಿಸಿದರೆ 5ಜಿಗಾಗಿ ಶೇ.5-10ರಷ್ಟು ಹೆಚ್ಚು ಶುಲ್ಕ ವಿಧಿಸುವ ಸಾಧ್ಯತೆ ಇದೆ. 5ಜಿ ಸೇವೆಗಳಿಗೆ ತಗಲುವ ವೆಚ್ಚ ಮರುಪಡೆಯಲು ಈ ಟೆಲಿಕಾಂ ಕಂಪನಿಗಳು ಒಂದೇ ವಿಧಾನವನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ. ಪ್ರಸ್ತುತ ಮೊಬೈಲ್ ದರವನ್ನು ಶೇ.20ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.