ನವದೆಹಲಿ:ಏರ್ ಇಂಡಿಯಾವನ್ನು ಖರೀದಿಸಿದಾಗಿನಿಂದಲೂ ತನ್ನ ಅಭಿವೃದ್ಧಿಯ ಭಾಗವಾಗಿ ವಿವಿಧ ಬದಲಾವಣೆಗಳನ್ನು ಮಾಡುತ್ತಾ ಬಂದಿರುವ ಟಾಟಾ ಗ್ರೂಪ್ ಇತ್ತೀಚೆಗಷ್ಟೇ ಕಂಪನಿಯ ಲೋಗೋ ಮತ್ತು ಏರ್ ಕ್ರಾಫ್ಟ್ ಲೈವರಿಯಲ್ಲಿ ಬದಲಾವಣೆ ತಂದಿದೆ. ಹೊಸ ರೂಪದ ವಿಮಾನದ ಮೊದಲ ಲುಕ್ನ ಫೋಟೋಗಳನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಕಂಪನಿ ಹಂಚಿಕೊಂಡಿದೆ.
ಏರ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಫ್ರಾನ್ಸ್‌ನ ಟೌಲೌಸ್ ಕಾರ್ಯಾಗಾರದಲ್ಲಿ ಹೊಸ ಲೋಗೋ ಮತ್ತು ವಿನ್ಯಾಸದೊಂದಿಗೆ A350 ವಿಮಾನದ ಫೋಟೋಗಳನ್ನು ಹಂಚಿಕೊಂಡಿದೆ. ಈ ಚಳಿಗಾಲದಲ್ಲಿ ಎ 350 ವಿಮಾನಗಳನ್ನು ಕಂಪನಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಗಮನಸೆಳೆಯುವ ಏರ್ ಇಂಡಿಯಾ ವಿಮಾನದ ಲೋಗೋ:'ದಿ ವಿಸ್ಟಾ' ಎಂಬ ಹೊಸ ಲೋಗೋ ಮಹಾರಾಜ ಮ್ಯಾಸ್ಕಾಟ್ ವಿಂಡೋ ಫ್ರೇಮ್ ಅನ್ನು ಒಳಗೊಂಡಿದೆ. ಕಂಪನಿಯ ಪ್ರಕಾರ, ಈ ಹೊಸ ಲೋಗೋ ಭವಿಷ್ಯದಲ್ಲಿ ಏರ್‌ಲೈನ್‌ನ ಅನಿಯಮಿತ ಸಾಧ್ಯತೆಗಳು, ಪ್ರಗತಿಶೀಲತೆ, ವಿಶ್ವಾಸ ಮತ್ತು ಧೈರ್ಯದ ಸಂಕೇತವಾಗಿದೆ. ಲೋಗೋದಲ್ಲಿನ ಏರ್ ಇಂಡಿಯಾ (AIR INDIA) ಫಾಂಟ್ ಅನ್ನು ಸಹ ಬದಲಾಯಿಸಲಾಗಿದೆ. ಇದಕ್ಕಾಗಿ ಅವರು ತಮ್ಮದೇ ಆದ 'ಏರ್ ಇಂಡಿಯಾ ಸಾನ್ಸ್' ಫಾಂಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅಲ್ಲದೇ ಕೆಂಪು, ನೇರಳೆ ಮತ್ತು ಹಸಿರು ಬಣ್ಣದ ವಿನ್ಯಾಸಗಳೊಂದಿಗೆ ವಿಮಾನಗಳ ಲುಕ್ ಅನ್ನು ಬದಲಾಯಿಸಲಾಗಿದೆ. ಈ ಮೂಲಕ ಸಂಪೂರ್ಣವಾಗಿ ಹೊಸತನದೊಂದಿಗೆ ಗ್ರಾಹಕರ ಮುಂದೆ ಅನಾವರಣಗೊಂಡಿದೆ.