ನವದೆಹಲಿ: ಏರ್ ಇಂಡಿಯಾ ಗ್ರೂಪ್ ತನ್ನ ಅಂಗಸಂಸ್ಥೆಗಳಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಏಷ್ಯಾವನ್ನು ಏಕೀಕೃತಗೊಳಿಸಿದೆ. ಇನ್ನು ಮುಂದೆ ಈ ಎರಡು ಸಂಸ್ಥೆಗಳು ಏಕೀಕೃತ ಟಿಕೆಟ್ ಮೀಸಲು ವ್ಯವಸ್ಥೆ ಮತ್ತು ವೆಬ್ಸೈಟ್ (ಯುನಿಫೈಡ್ ರಿಸರ್ವೇಶನ್ ಸಿಸ್ಟಮ್ ಮತ್ತು ವೆಬ್ಸೈಟ್) ಹೊಂದಿರಲಿವೆ ಎಂದು ಮಂಗಳವಾರ ಏರ್ ಇಂಡಿಯಾ ಗ್ರೂಪ್ ತಿಳಿಸಿದೆ. ಕ್ರಮೇಣ ಈ ಎರಡೂ ಸಂಸ್ಥೆಗಳ ಆಂತರಿಕ ವ್ಯವಸ್ಥೆಗಳನ್ನು ಮತ್ತು ವಿಮಾನ ಹಾರಾಟದ ಸೇವೆ ಮತ್ತು ಇತರ ಸೇವೆಗಳನ್ನು ಸಂಯೋಜಿಸುವ ಕಾರ್ಯ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಗ್ರೂಪ್, ಕಡಿಮೆ ವೆಚ್ಚದ ಎರಡು ವಿಮಾನಯಾನ ಸಂಸ್ಥೆಗಳು ಒಂದಾಗಿ ಕಾರ್ಯ ನಿರ್ವಹಿಸಲು ಚಿಂತಿಸಲಾಗಿದೆ. ಇದರ ಭಾಗವಾಗಿ ಏಕೀಕೃತ ಮೀಸಲಾತಿ ವ್ಯವಸ್ಥೆ ಮತ್ತು ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣ, ಗ್ರಾಹಕ ಸಹಾಯವಾಣಿ ವ್ಯವಸ್ಥೆಯನ್ನು ಒಗ್ಗೂಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಏರ್ ಏಷಿಯಾ ಇಂಡಿಯಾ ಬಳಸುತ್ತಿರುವ ವ್ಯವಸ್ಥೆಯನ್ನು ಏರ್ ಇಂಡಿಯಾ ಅಳವಡಿಕೊಳ್ಳಲಿದ್ದು, ಇದರಿಂದ ವಿಮಾನ ಯಾನ ಮಾಡುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಹೇಳಿದೆ. ಈ ಮೂಲಕ ಪ್ರಯಾಣಿಕರು ಯಾವುದೇ ಸಂಸ್ಥೆಗಳ ವಿಮಾನಯಾನ ಟಿಕೆಟ್ ಬುಕ್ಕಿಂಗ್ ಮಾಡಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಿದೆ. ಇನ್ನು, ಈ ಬಗ್ಗೆ ಎಲ್ಲಾ ಮಾಹಿತಿ ನಮಗೆ airindiaexpress.com ಲಭ್ಯವಾಗಲಿದೆ ಎಂದು ಇದೇ ವೇಳೆ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಿಇಒ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್ ," ಈ ಪ್ರಮುಖ ಬದಲಾವಣೆಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್‌ಏಷ್ಯಾ ಇಂಡಿಯಾದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಹೊಸ ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದಾಗಿ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈ ಎರಡು ಸಂಸ್ಥೆಗಳ ಸಂಯೋಜನೆಗಳಿಂದ ಸಂಸ್ಥೆಯು ಉನ್ನತ ಅವಕಾಶಗಳಿಗೆ ತನ್ನನ್ನು ತಾನು ತೆರೆದುಕೊಳ್ಳಲು ಮತ್ತು ಗ್ರಾಹಕರಿಗೆ ಮತ್ತು ಉದ್ಯೋಗಿಗಳಿಗೆ, ವಿಮಾನಯಾನಕ್ಕೆ ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾದ ಏಕೀಕರಣವು, ವಿವಿಧ ವಿಮಾನಯಾನ ಸಂಸ್ಥೆಗಳ ಉತ್ತಮ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ಆದಾಯ ವೆಚ್ಚ ಮತ್ತು ಉತ್ತಮ ಕಾರ್ಯಾಚರಣೆ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಜೊತೆಗೆ ಹೆಚ್ಚಿನ ಆರ್ಥಿಕತೆ ಹೊಂದಲು ಸಹಕಾರಿಯಾಗುತ್ತದೆ ಎಂದು ಏರ್ಲೈನ್ ಹೇಳಿದೆ.
ಹೊಸ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೇಶದ ಪ್ರಮುಖ ನಗರಗಳ ಮೇಲೆ ಮತ್ತು ವೇಗವಾಗಿ ಬೆಳೆಯುತ್ತಿರುವ ಅಂತರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಏರ್ ಏಷಿಯಾ ಇಂಡಿಯಾ ವಿಮಾನಗಳು ದೇಶಾದ್ಯಂತ ಒಟ್ಟು 19 ಸ್ಥಳಗಳಲ್ಲಿ ಸಂಚಾರ ನಡೆಸುತ್ತಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೇಶದ 19 ಸ್ಥಳಗಳಿಂದ 14 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಚಾರ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆ ಏರ್ ಇಂಡಿಯಾ ಗ್ರೂಪ್ ಏರ್ ಏಷ್ಯಾ ಸಂಸ್ಥೆಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿತ್ತು. ಅಲ್ಲದೆ ಏರ್ ಏಷ್ಯಾ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗೆ ಒಬ್ಬರೇ ಸಿಇಓವನ್ನು ನೇಮಕ ಮಾಡಿತ್ತು.
ಇದನ್ನೂ ಓದಿ :ಕರ್ನಾಟಕ ಇಡೀ ದೇಶದಲ್ಲಿ ಹೆಚ್ಚು ಏರ್ಪೋರ್ಟ್ ಹೊಂದಿರುವ ರಾಜ್ಯ: ಸಚಿವ ಸಿಂಧಿಯಾ