ನವದೆಹಲಿ:ಏರ್ ಇಂಡಿಯಾವನ್ನು ಸರ್ಕಾರದಿಂದ ಸ್ವಾಧೀನಪಡಿಸಿಕೊಂಡ ಬಳಿಕ ಹಲವು ಮಹತ್ತರ ಹೆಜ್ಜೆಗಳನ್ನು ಇಡುತ್ತಿರುವ ಟಾಟಾ ಸಮೂಹ, ಫ್ರಾನ್ಸ್ನ ಏರ್‌ಬಸ್ ಕಂಪನಿಯಿಂದ ವೈಡ್ ಬಾಡಿ A350 ವಿಮಾನ ಖರೀದಿಸಿ ಇತಿಹಾಸ ನಿರ್ಮಿಸಿದೆ. ಜೊತೆಗೆ ದೈತ್ಯ ವಿಮಾನವನ್ನು ಪಡೆದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಫ್ರಾನ್ಸ್ನ ಏರ್ಬಸ್ನಿಂದ ಎ350 ಮಾದರಿಯ 20 ವಿಮಾನಗಳ ಖರೀದಿಗೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಅದರ ಭಾಗವಾಗಿ ಮೊದಲ ವಿಮಾನ ಶನಿವಾರ ನವದೆಹಲಿಗೆ ಬಂದಿಳಿದಿದೆ. 2012 ರಲ್ಲಿ ಬೋಯಿಂಗ್ 787 ಡ್ರೀಮ್‌ಲೈನರ್ ಮಾದರಿಯನ್ನು ಏರ್ ಇಂಡಿಯಾ ಖರೀದಿ ಮಾಡಿತ್ತು.
ಈ ಬಗ್ಗೆ ಏರ್ ಇಂಡಿಯಾವು ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಏರ್ಬಸ್ನಿಂದ ಮೊದಲ A350 ವಿಮಾನ ಶನಿವಾರ ಅಧಿಕೃತವಾಗಿ ಬಂದಿಳಿದಿದೆ. ವೈಡ್ ಬಾಡಿ ವಿಮಾನ ಹೊಂದಿದ ಮೊದಲ ಭಾರತೀಯ ಸಂಸ್ಥೆ ಎಂಬ ಇತಿಹಾಸವನ್ನು ನಿರ್ಮಿಸಿದೆ. ವಿಟಿ- ಜೆಆರ್ಎ ಏರ್‌ಲೈನ್‌ನ ಬೋಲ್ಡ್ ನ್ಯೂ ಲೈವರಿಯಲ್ಲಿ ನೋಂದಾಯಿಸಲಾಗಿದೆ. ಸಂಸ್ಥೆಯ ವಿಮಾನಯಾನಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ಹೇಳಿಕೆ ನೀಡಿದೆ.
ಭಾರತೀಯ ವಾಯುಯಾನದ ಪುನರುಜ್ಜೀವನಕ್ಕೆ ಏರ್ ಇಂಡಿಯಾ ದೊಡ್ಡ ಕೊಡುಗೆ ನೀಡಿದೆ. ಭಾರತದಲ್ಲಿ ಮೊದಲ ವೈಡ್ ಬಾಡಿ ಪ್ರಕಾರದ ವಿಮಾನವನ್ನು ಪರಿಚಯಿಸಿತು. 2012ರಲ್ಲಿ ಬೋಯಿಂಗ್ 787 ಡ್ರೀಮ್‌ಲೈನರ್ ಫ್ಲೀಟ್ ಮಾದರಿಯನ್ನು ಪರಿಚಯಿಸಲಾಗಿತ್ತು. ಈ ಕ್ಷಣವು ನೆನಪಿನಲ್ಲಿಡಬೇಕಾದ ಅಂಶವಾಗಿದೆ ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಅಭಿಪ್ರಾಯಪಟ್ಟರು.
ವಿಮಾನದ ವಿಶೇಷತೆ ಏನು?:ಏರ್ ಇಂಡಿಯಾ ಪಡೆದುಕೊಂಡಿರುವ ಮೊದಲ A350 ವಿಮಾನವನ್ನು ಕಾಲಿನ್ಸ್ ಏರೋಸ್ಪೇಸ್ ವಿನ್ಯಾಸಗೊಳಿಸಿದೆ. ಇದು 316 ಸೀಟುಗಳನ್ನು ಹೊಂದಿದೆ. ಇದರಲ್ಲಿ 28 ಬಿಸಿನೆಸ್ ಕ್ಲಾಸ್, 24 ಹೆಚ್ಚುವರಿ ಲೆಗ್‌ರೂಮ್, ವಿಭಿನ್ನ ವೈಶಿಷ್ಟ್ಯಗಳೊಂದಿಗೆ 24 ಪ್ರೀಮಿಯಂ ಎಕಾನಮಿ ಸೀಟುಗಳು ಮತ್ತು 264 ಸಾಮಾನ್ಯ ವರ್ಗದ ಆಸನಗಳಿವೆ. ಇದು ಬೇರೆಲ್ಲಾ ವಿಮಾನಗಳಿಗಿಂತ ಹೆಚ್ಚಿನ ಜನರನ್ನ ಏಕಕಾಲಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಇಂಧನ ವೆಚ್ಚವೂ ಸಾಂಪ್ರದಾಯಿಕ ವಿಮಾನಗಳಿಂಗ ಶೇಕಡಾ 25ರಷ್ಟು ಕಡಿಮೆಯಾಗಿದೆ.
ಆಧುನಿಕ ಸೌಕರ್ಯಗಳ ಜೊತೆಗೆ ಹೆಚ್ಚಿನ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. 2500 ಕೋಟಿ ರೂಪಾಯಿ ವೆಚ್ಚದ ವಿಮಾನವಾಗಿದೆ. 20 ವಿಮಾನಗಳ ಖರೀದಿಗೆ ಏರ್ಬಸ್ನೊಂದಿಗೆ 5.81 ಲಕ್ಷ ಕೋಟಿ ರೂಪಾಯಿ ವೆಚ್ಚದ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ ಮೊದಲ ವಿಮಾನ ಬಂದಿದ್ದು, ಇನ್ನೂ ಐದು ವಿಮಾನಗಳು 2024 ರ ಮಧ್ಯಭಾಗದಲ್ಲಿ ಕೈಸೇರಲಿವೆ. ಇನ್ನುಳಿದ ವಿಮಾನಗಳು ಹಂತ- ಹಂತವಾಗಿ ಸಂಸ್ಥೆಗೆ ಹಸ್ತಾಂತರವಾಗಲಿವೆ.
ಇದನ್ನೂ ಓದಿ:ಮಂಗಳೂರಿಗೆ ಬರುತ್ತಿದ್ದ ಕಚ್ಚಾತೈಲ ಹಡಗಿನ ಮೇಲೆ ಡ್ರೋನ್ ದಾಳಿ: ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ