ನವದೆಹಲಿ: ಜೂನ್ 6 ರಂದು ನಡೆದ ಏರ್‌ಲೈನ್ಸ್ ಸಲಹಾ ಸಮಿತಿ ಸಭೆ ನಂತರ ದೆಹಲಿಯಿಂದ ಕೆಲವು ಮಾರ್ಗಗಳಲ್ಲಿ ಸಂಚರಿಸುವ ವಿಮಾನ ದರಗಳನ್ನು ಗಣನೀಯವಾಗಿ ಅಂದರೆ ಶೇ 14 ರಿಂದ 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ವಿಮಾನಯಾನ ಸಚಿವ ಸಿಂಧಿಯಾ, ದೆಹಲಿಯಿಂದ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಯಂತಹ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರಗಳಲ್ಲಿ ಕಡಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, "ಜೂನ್ 6 ರಂದು ದೆಹಲಿ - ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರವನ್ನು ಶೇಕಡಾ 14 - 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ಸಚಿವಾಲಯವು ದೈನಂದಿನ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರವು ಮಾಡಿದ ಸಾಧನೆಗಳು ಹಾಗೂ ಬದಲಾವಣೆ ಬಗ್ಗೆ ಮಾತನಾಡುವ ವೇಳೆ ವಿಮಾನ ಸಚಿವ ಸಿಂದಿಯಾ ಈ ವಿಚಾರ ತಿಳಿಸಿದ್ದಾರೆ. ದರಗಳಿಗೆ ಸಂಬಂಧಿಸಿದಂತೆ ವಿಮಾನಯಾನ ವಲಯವು ಕೆಲ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವಿಮಾನಯಾನ ಸಂಸ್ಥೆಗಳಿಗೆ ವಿಮಾನ ದರಗಳನ್ನು ನಿರ್ಧರಿಸುವ ಅಧಿಕಾರವಿದೆ ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಮತ್ತು ಸೀಸನ್ ಸೇರಿದಂತೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಸಿಂಧಿಯಾ ಹೇಳಿದ್ದಾರೆ.
"ಮಾರುಕಟ್ಟೆ ನಿಯಂತ್ರಿತ ವಿಮಾನಯಾನ ದರಗಳನ್ನು ನಿಗದಿಪಡಿಸಲು ಏರ್‌ಲೈನ್‌ಗಳಿಗೆ ಹಕ್ಕುಗಳನ್ನು ನೀಡಲಾಗಿದೆ. ದೇಶದಲ್ಲಿ ವಿಮಾನಯಾನ ಮಾರುಕಟ್ಟೆಯು ಋತು ಆಧಾರಿತವಾಗಿದೆ. ದರಗಳನ್ನು ಸಹ ಅದಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಸಾಮರ್ಥ್ಯ ಕಡಿಮೆ ಮತ್ತು ಬೇಡಿಕೆ ಹೆಚ್ಚಿದ್ದರೆ ಮತ್ತು ಇನ್‌ಪುಟ್ ವೆಚ್ಚಗಳು ಕಡಿಮೆಯಾಗದಿದ್ದರೆ, ದರಗಳು ಹೆಚ್ಚಾಗಿರುತ್ತದೆ. ದರವನ್ನು ನಿರ್ಧರಿಸಲು ಒಂದು ಮಾನದಂಡ ಇದೆ ಎಂಬುದನ್ನು ಸಚಿವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.