ಸಿಂಗಾಪುರ: ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ ಉಂಟಾಗುತ್ತಿದ್ದಂತೆಯೇ ಎರಡನೇ ತ್ರೈಮಾಸಿಕದಲ್ಲಿ ಸಿಂಗಾಪುರದಲ್ಲಿ ಕೂಡ 'ತಾಂತ್ರಿಕ ಆರ್ಥಿಕ ಹಿಂಜರಿತ' ಉಂಟಾಗುವ ಆತಂಕ ಎದುರಾಗಿದೆ. ಜಾಗತಿಕವಾಗಿ ಸರಕು ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ಸಿಂಗಾಪುರದ ರಫ್ತು ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿಂದ ದೇಶದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಎದುರಾಗಿದೆ. ಸಿಂಗಾಪುರದ ಆರ್ಥಿಕತೆಯು ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಗಮನಾರ್ಹ.
"ಎರಡನೇ ತ್ರೈಮಾಸಿಕ ಅಥವಾ ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆಯು ತಾಂತ್ರಿಕ ಹಿಂಜರಿತಕ್ಕೆ ಜಾರುವ ಹೆಚ್ಚಿನ ಅಪಾಯವಿದೆ" ಎಂದು ಸಿಂಗಾಪುರದ ಕ್ಯಾಪಿಟಲ್ ಎಕನಾಮಿಕ್ಸ್‌ನ ಆರ್ಥಿಕ ತಜ್ಞ ಶಿವನ್ ಟಂಡನ್ ಹೇಳಿದ್ದಾರೆ. ಸತತವಾಗಿ ಎರಡು ತ್ರೈಮಾಸಿಕಗಳಲ್ಲಿ ವಾಸ್ತವ ಜಿಡಿಪಿಯಲ್ಲಿ ಋಣಾತ್ಮಕ ಬೆಳವಣಿಗೆಯನ್ನು ತಾಂತ್ರಿಕ ಹಿಂಜರಿತ ಎಂದು ವ್ಯಾಖ್ಯಾನಿಸಲಾಗಿದೆ. "ಮುಂದುವರಿದ ಆರ್ಥಿಕತೆಯ ದೇಶಗಳು ಈ ಹಿಂದೆ ಊಹಿಸಿದ್ದಕ್ಕಿಂತ ಉತ್ತಮವಾಗಿ ಅಭಿವೃದ್ಧಿಯ ಗತಿಯನ್ನು ತೋರ್ಪಡಿಸಿರುವುದರಿಂದ ವರ್ಷದ ದ್ವಿತೀಯಾರ್ಧದಲ್ಲಿ ಸ್ಥಿತಿಸ್ಥಾಪಕತ್ವವು ಮಸುಕಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಸಿಂಗಾಪುರದ ರಫ್ತುಗಳ ಬೇಡಿಕೆಯ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಲಿದೆ" ಎಂದು ಅವರು ತಿಳಿಸಿದರು.
ಅಧಿಕೃತ ಅಂಕಿ ಅಂಶಗಳು ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ 0.4 ರಷ್ಟು ಇಳಿಕೆಯಾಗಿರುವುದನ್ನು ತೋರಿಸಿವೆ. 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಇದ್ದ ಬೆಳವಣಿಗೆ ದರಕ್ಕೆ ಹೋಲಿಸಿದರೆ ಇದು ಶೇ 0.1 ರಷ್ಟು ಹಿಂಜರಿಕೆಯಾಗಿದೆ. ಹೀಗಾಗಿ ತಾಂತ್ರಿಕ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಸಿಂಗಾಪುರದ ಆರ್ಥಿಕತೆಯು ಬಹಳ ಚಿಕ್ಕದು ಹಾಗೂ ಮುಕ್ತವಾಗಿದ್ದು, ಬಾಹ್ಯ ವ್ಯಾಪಾರ ವಹಿವಾಟಿನ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ದೇಶದ ರಫ್ತು ವಹಿವಾಟು ಕಡಿಮೆಯಾಗುತ್ತಿದೆ.