ಕರ್ನಾಟಕ

karnataka

ETV Bharat / business

ಟರ್ಮ್ ಲೈಫ್ ಪಾಲಿಸಿಗೆ ರೈಡರ್​ ಕವರ್ ಸೇರಿಸಿ: ಹೆಚ್ಚುವರಿ ವಿಮಾ ಸುರಕ್ಷೆ ನಿಮ್ಮದಾಗಿಸಿ - ವೇವರ್ ಆಫ್ ಪ್ರೀಮಿಯಂ

ಟರ್ಮ್ ಲೈಫ್ ವಿಮಾ ಪಾಲಿಸಿಯೊಂದಿಗೆ ಕೆಲವೊಂದು ರೈಡರ್​ ಕವರ್ ಪಾಲಿಸಿಗಳನ್ನು ಕೊಳ್ಳುವ ಮೂಲಕ ನಿಮ್ಮ ವಿಮಾ ಪಾಲಿಸಿಯಿಂದ ಸಿಗುವ ವಿಮಾ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದು. ವಿಭಿನ್ನ ಸಂದರ್ಭಗಳಿಗೆ ಅನುಕೂಲವಾಗುವಂತೆ ಹಲವಾರು ರೈಡರ್ ಕವರ್ ಲಭ್ಯ ಇದೆ.

Add riders to your term insurance for added protection
Add riders to your term insurance for added protection

By

Published : Jan 10, 2023, 5:48 PM IST

ಹೈದರಾಬಾದ್: ಕೆಲವೊಮ್ಮೆ ನೀವು ತೆಗೆದುಕೊಳ್ಳುವ ಚಿಕ್ಕ ಪುಟ್ಟ ಕಾಳಜಿಗಳೇ ಮುಂದೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ಒಂದೊಮ್ಮೆ ನೀವು ಹೊಸ ವರ್ಷದಲ್ಲಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ಇಚ್ಛಿಸಿದಲ್ಲಿ, ರೈಡರ್ ಪಾಲಿಸಿಗಳ ಬಗ್ಗೆಯೂ ವಿಚಾರಿಸಿ ತಿಳಿದುಕೊಳ್ಳಿ. ಅನಿರೀಕ್ಷಿತ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಯಾವುದೇ ಅನಗತ್ಯ ಹೊರೆಯಿಂದ ನಿಮ್ಮನ್ನು ರಕ್ಷಿಸಲು ಈ ರೈಡರ್ ಪಾಲಿಸಿಗಳನ್ನು ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಮರೆಯಬೇಡಿ. ರೈಡರ್‌ಗಳು ನಿಮ್ಮ ಮೂಲ ಪಾಲಿಸಿಯ ಮೌಲ್ಯವನ್ನು ಹೆಚ್ಚಿಸುತ್ತವೆ ಮತ್ತು ಕೆಲ ಸಂದರ್ಭಗಳಲ್ಲಿ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತವೆ.

ವಿಮಾ ಕಂಪನಿಗಳು ಟರ್ಮ್ ಪಾಲಿಸಿಗಳೊಂದಿಗೆ ವಿವಿಧ ರೀತಿಯ ರೈಡರ್ ಕವರ್‌ಗಳನ್ನು ನೀಡುತ್ತವೆ. ಎಲ್ಲರಿಗೂ ಈ ಎಲ್ಲ ರೈಡರ್ ಕವರ್‌ಗಳು ಅಗತ್ಯ ಇಲ್ಲದೇ ಇರಬಹುದು.ಆದರೂ ಎಚ್ಚರಿಕೆಯಿಂದ ಇವುಗಳನ್ನು ಪರಿಗಣಿಸಿ ಅಗತ್ಯಕ್ಕೆ ತಕ್ಕಂತೆ ಯಾವುದನ್ನಾದರೂ ತೆಗೆದುಕೊಳ್ಳಬಹುದು. ರೈಡರ್ ಪಾಲಿಸಿಗಳು ಅಪಘಾತಗಳು ಮತ್ತು ಗಂಭೀರ ಕಾಯಿಲೆಗಳ ಸಮಯದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಖಚಿತಪಡಿಸುತ್ತವೆ. ಕೆಲ ವಿಮಾ ಕಂಪನಿಗಳು ಪ್ರೀಮಿಯಂ ಮನ್ನಾ ಸೌಲಭ್ಯವನ್ನು ಸಹ ಒದಗಿಸುತ್ತವೆ.

ಹೆಚ್ಚುವರಿ ವಿಮಾ ರಕ್ಷಣೆ:ಒಂದು ವೇಳೆ, ಆಕಸ್ಮಿಕವಾಗಿ ಪಾಲಿಸಿದಾರರಿಗೆ ಏನಾದರೂ ಅಪಾಯ ಸಂಭವಿಸಿದಲ್ಲಿ, 'ಆಕ್ಸಿಡೆಂಟಲ್ ಡೆತ್ ರೈಡರ್' ಹೆಚ್ಚುವರಿ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಅಪಘಾತವಾದ ಕೆಲವೇ ದಿನಗಳಲ್ಲಿ ಸಾವು ಸಂಭವಿಸಿದಲ್ಲಿ ಈ ರೈಡರ್ ಅಡಿ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ಇದು ಸ್ಟ್ಯಾಂಡರ್ಡ್ ಪಾಲಿಸಿಯ ಅಡಿ ಒದಗಿಸಲಾದ ಪರಿಹಾರದ ಜೊತೆಗೆ, ಫಲಾನುಭವಿ ಕುಟುಂಬಕ್ಕೆ ಯಾವುದೇ ಅನಿರೀಕ್ಷಿತ ಆರ್ಥಿಕ ಹೊರೆಯಿಂದ ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ.

ನೀವು 'ಕ್ರಿಟಿಕಲ್ ಇಲ್ನೆಸ್' ಪಾಲಿಸಿ ಆರಿಸಿಕೊಂಡರೆ, ಪಾಲಿಸಿ ಅವಧಿಯಲ್ಲಿ ಯಾವುದೇ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ಇದರಿಂದ ನಿಮಗೆ ಪರಿಹಾರ ಸಿಗುತ್ತದೆ. ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಯ ರೋಗನಿರ್ಣಯದ ಮೇಲೆ ಚಿಕಿತ್ಸೆಯ ವೆಚ್ಚವನ್ನು ಲೆಕ್ಕಿಸದೇ ಪಾಲಿಸಿಯು ನಿಗದಿತ ಮೊತ್ತವನ್ನು ಪಾವತಿಸುತ್ತದೆ. ಕೆಲವೊಮ್ಮೆ, ಪಾವತಿಸಿದ ಪರಿಹಾರವನ್ನು ಮೂಲ ಪಾಲಿಸಿಯಿಂದ ಹೊರಗಿಡಲಾಗುತ್ತದೆ. ಇಲ್ಲದಿದ್ದರೆ, ಹೆಚ್ಚುವರಿ ಮೊತ್ತವನ್ನು ಪಾವತಿಸಲಾಗುತ್ತದೆ. ಇದೆಲ್ಲವೂ ನೀವು ಆಯ್ಕೆ ಮಾಡುವ ಪಾಲಿಸಿಯನ್ನು ಅವಲಂಬಿಸಿರುತ್ತದೆ.

ಟರ್ಮ್​​​​​​​​​ ಪಾಲಿಸಿ ಪ್ರೀಮಿಯಂ ಪಾವತಿ ಕಷ್ಟವಾಗಬಹುದು:ಕಂಪನಿಗಳು 'ವೇವರ್ ಆಫ್ ಪ್ರೀಮಿಯಂ' ರೈಡರ್‌ಗಳನ್ನು ಸಹ ನೀಡುತ್ತವೆ. ಗಂಭೀರ ಕಾಯಿಲೆಗಳು, ಅಪಘಾತ, ಅಂಗವೈಕಲ್ಯ ಇತ್ಯಾದಿಗಳ ಸಂದರ್ಭದಲ್ಲಿ ಪಾಲಿಸಿದಾರರಿಗೆ ಟರ್ಮ್ ಪಾಲಿಸಿ ಪ್ರೀಮಿಯಂ ಪಾವತಿಸಲು ಕಷ್ಟವಾಗಬಹುದು. ಈ ಸಂದರ್ಭದಲ್ಲಿ 'ವೇವರ್ ಆಫ್ ಪ್ರೀಮಿಯಂ' ರೈಡರ್ ಪ್ರೀಮಿಯಂ ಪಾವತಿಸದೆ ಪಾಲಿಸಿಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಹಣಕಾಸಿನ ತೊಂದರೆಗಳ ಸಂದರ್ಭದಲ್ಲಿ ಪಾಲಿಸಿಯನ್ನು ಮುಂದುವರಿಸಲು ಈ ಪೂರಕ ಪಾಲಿಸಿಯನ್ನು ಆರಿಸಿಕೊಳ್ಳುವುದು ಅವಶ್ಯಕ.

ಟರ್ಮ್, ಯುಲಿಪ್, ಹೋಲ್ ಲೈಫ್, ಎಂಡೋಮೆಂಟ್ ಹೀಗೆ ನಿಮ್ಮ ಯಾವುದೇ ಜೀವ ವಿಮಾ ಯೋಜನೆಗಳಿಗೆ ರೈಡರ್ ಅನ್ನು ಜೋಡಿಸಬಹುದು ಮತ್ತು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಯೋಜನೆಯನ್ನು ಕಸ್ಟಮೈಸ್ ಮಾಡಬಹುದು. ಪಾಲಿಸಿ ಕೊಳ್ಳುವವರು ರೈಡರ್​ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅವಶ್ಯಕತೆಗೆ ಅನುಗುಣವಾಗಿ ಅವನ್ನು ಆಯ್ಕೆ ಮಾಡಬೇಕು ಎಂಬುದು ಗಮನದಲ್ಲಿರಲಿ. ತರಾತುರಿಯಲ್ಲಿ ಹಿಂದೆ ಮುಂದೆ ಯೋಚಿಸದೇ ರೈಡರ್ ಪಾಲಿಸಿ ತೆಗೆದುಕೊಂಡರೆ ನಿಮ್ಮ ಹಣ ವ್ಯರ್ಥವಾಗಬಹುದು. ಯಾವುದೇ ಸಂದರ್ಭದಲ್ಲಿ ನಿಮ್ಮ ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೈಡರ್‌ಗಳನ್ನು ಆಯ್ಕೆಮಾಡಿ. ಆಗ ಮಾತ್ರ ಅವುಗಳಿಂದ ನಿಮಗೆ ಹೆಚ್ಚುವರಿ ವಿಮಾ ರಕ್ಷಣೆ ಸಿಗುತ್ತದೆ.

ಇದನ್ನೂ ಓದಿ: ಐಸಿಐಸಿಐ ವಂಚನೆ ಪ್ರಕರಣ: ಜಾಮೀನು ಕೋರಿದ ವೇಣುಗೋಪಾಲ್ ಧೂತ್, 13 ರಂದು ವಿಚಾರಣೆ

ABOUT THE AUTHOR

...view details