ನವದೆಹಲಿ : ಅದಾನಿ-ಹಿಂಡೆನ್‌ಬರ್ಗ್ ವಿವಾದದ ಕುರಿತು ನಡೆಸಲಾದ ತನಿಖೆಯ ಬಗ್ಗೆ ಆಗಸ್ಟ್ 14 ರಂದು ಹೊಸ ತನಿಖಾ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಕೇಳಿದೆ. ಈ ವಿಷಯದಲ್ಲಿ ಹೆಚ್ಚಿನ ಚರ್ಚೆಗಳಿಗೆ ಸಾಧ್ಯವಾಗುವಂತೆ ನ್ಯಾಯಮೂರ್ತಿ ಎ.ಎಂ. ಸಪ್ರೆ ಸಮಿತಿಯ ವರದಿಯ ಪ್ರತಿಗಳನ್ನು ಕಕ್ಷಿದಾರರಿಗೆ ನೀಡಲು ಸಹ ಕೋರ್ಟ್ ಇದೇ ಸಂದರ್ಭದಲ್ಲಿ ಸೂಚಿಸಿತು. ಸೆಪ್ಟೆಂಬರ್ವರೆಗೂ ನ್ಯಾಯಾಲಯ ನಿಮಗೆ ಸಮಯ ನೀಡಬಹುದು, ಆದರೆ ನಿಮ್ಮ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಆಗಸ್ಟ್ 14 ರಂದು ನಮಗೆ ನವೀಕರಿಸಲಾದ ವರದಿ ನೀಡಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಸೆಬಿಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
ಸೆಬಿ ತನ್ನ ವರದಿಯನ್ನು ಪೂರ್ಣಗೊಳಿಸಲು ಈ ಹಿಂದೆ ನೀಡಲಾಗಿದ್ದ 6 ತಿಂಗಳ ಅವಧಿಯ ವಿಸ್ತರಣೆಯನ್ನು ಈಗಾಗಲೇ ಕಡಿಮೆಗೊಳಿಸಲಾಗಿದೆ ಎಂದು ಮೆಹ್ತಾ ವಾದಿಸಿದರು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಕೂಡ ಇದ್ದ ಪೀಠವು, ನ್ಯಾಯಾಲಯವು ಆರಂಭದಲ್ಲಿ ತನಿಖಾ ಅವಧಿಯನ್ನು ಎರಡು ತಿಂಗಳು ವಿಸ್ತರಣೆ ಮಾಡಿದಾಗ ನೀವು ಏನು ಮಾಡಿದಿರಿ ಎಂಬುದನ್ನು ಮೊದಲು ತಿಳಿಸಿ. ಈಗ ಆಗಸ್ಟ್ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲಿಗೆ ಒಟ್ಟು ಅವಧಿ ಐದು ತಿಂಗಳಾಗುತ್ತದೆ ಎಂದು ಮೆಹ್ತಾ ಅವರಿಗೆ ಹೇಳಿತು. ತನಿಖೆಯನ್ನು ಪೂರ್ಣಗೊಳಿಸಲು ಅನಿರ್ದಿಷ್ಟಾವಧಿ ನೀಡಲಾಗದು ಎಂಬುದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿತು.