ನವದೆಹಲಿ: ತನ್ನ ಬ್ಯಾಲೆನ್ಸ್ ಶೀಟ್ "ತುಂಬಾ ಉತ್ತಮ" ಸ್ಥಿತಿಯಲ್ಲಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಷೇರುಗಳಲ್ಲಿನ ನಿರಂತರ ಚಂಚಲತೆಯ ನಡುವೆ ವ್ಯಾಪಾರ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಮತ್ತು ನೋಡಿಕೊಳ್ಳುತ್ತೇವೆ ಎಂದು ಹೂಡಿಕೆದಾರರಿಗೆ ಅದಾನಿ ಗ್ರೂಪ್ ಬುಧವಾರ ಭರವಸೆ ನೀಡಿದೆ. ಅಮೆರಿಕದ ಹೂಡಿಕೆಗಳ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಬೆಲೆಯಲ್ಲಿ ಭಾರಿ ಏರುಪೇರು ಕಂಡು ಬಂದಿತ್ತು. ಹೀಗಾಗಿ ಕಂಪನಿ ಹೂಡಿಕೆದಾರರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದೆ.
ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ಹೂಡಿಕೆದಾರರನ್ನು ಉದ್ದೇಶಿಸಿ ಅದಾನಿ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿ ಜುಗ್ಶಿಂದರ್ ಸಿಂಗ್ ಮಾತನಾಡಿದ್ದಾರೆ. ಕಂಪನಿಯ ಆಂತರಿಕ ನಿಯಂತ್ರಣ, ಅನುಸರಣೆ ಮತ್ತು ಕಾರ್ಪೊರೇಟ್ ಆಡಳಿತದ ಬಗ್ಗೆ ತಮಗೆ ಅತ್ಯಂತ ವಿಶ್ವಾಸ ಇದೆ ಎಂದು ಜುಗ್ಶಿಂದರ್ ಸಿಂಗ್ ಹೇಳಿದ್ದಾರೆ. ಅದಾನಿ ಸಮೂಹವು ತನ್ನ ಕಂಪನಿಗಳ ಹಣಕಾಸು ವ್ಯವಹಾರದ ಎಲ್ಲ ಪ್ರಮುಖ ಅಂಶಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿದೆ. ಕಂಪನಿ ಸಾಕಷ್ಟು ಸದೃಢವಾಗಿದೆ ಅಗತ್ಯ ಹಣಕಾಸು ಹೊಂದಿದೆ. ಮತ್ತು ಸಾಲಗಳನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದ್ದು, ಹೂಡಿಕೆದಾರರಿಗೆ ತಾನು ಸದೃಢವಾಗಿದ್ದೇನೆ ಎಂಬ ಸಂದೇಶ ರವಾನಿಸಿದೆ.
ನಾವು ಸದೃಢವಾಗಿದ್ದೇವೆ- ಅದಾನಿ ಗ್ರೂಪ್;ನಮ್ಮ ಎಲ್ಲ ವ್ಯವಹಾರ ಮತ್ತು ಲೆಕ್ಕಪತ್ರಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಜುಗ್ಶಿಂದರ್ ಸಿಂಗ್ ಹೇಳಿದ್ದಾರೆ. ನಾವು ಉದ್ಯಮದ ಪ್ರಮುಖ ಬೆಳವಣಿಗೆಯ ಸಾಮರ್ಥ್ಯ, ಬಲವಾದ ಕಾರ್ಪೊರೇಟ್ ಕಾರ್ಯಾಚರಣೆಗಳು, ಸುರಕ್ಷಿತ ಸ್ವತ್ತುಗಳು ಮತ್ತು ಬಲವಾದ ನಗದು ಹರಿವನ್ನು ಹೊಂದಿದ್ದೇವೆ. ಪ್ರಸ್ತುತ ಮಾರುಕಟ್ಟೆಯು ಸ್ಥಿರಗೊಂಡ ನಂತರ ನಾವು ನಮ್ಮ ಬಂಡವಾಳ ಮಾರುಕಟ್ಟೆಯ ಕಾರ್ಯತಂತ್ರವನ್ನು ಪರಿಶೀಲಿಸುತ್ತೇವೆ. ಆದರೆ,ಷೇರುದಾರರಿಗೆ ಬಲವಾದ ಆದಾಯವನ್ನು ನೀಡುವಂತಹ ವ್ಯವಹಾರವನ್ನು ತಲುಪಿಸುವ ನಮ್ಮ ಸಾಮರ್ಥ್ಯದ ಬಗ್ಗೆ ನಾವು ವಿಶ್ವಾಸ ಹೊಂದಿದ್ದೇವೆ ಎಂದಿದ್ದಾರೆ.