ನವದೆಹಲಿ: ಇಸ್ರೇಲ್ನ ಆಯಕಟ್ಟಿನ ಹೈಫಾ ಬಂದರನ್ನು ತಮ್ಮ ದೇಶವು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿರುವುದು ಭಾರತದ ಮೇಲಿನ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಭಾರತದಲ್ಲಿ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಬುಧವಾರ ಹೇಳಿದ್ದಾರೆ. ಇದು ನಮ್ಮ ದೃಷ್ಟಿಕೋನದಿಂದ ಬಹಳ ಮುಖ್ಯವಾದ ಕ್ರಮವಾಗಿದೆ. ಏಕೆಂದರೆ ಹೈಫಾ ಬಂದರು ನಮ್ಮ ಭದ್ರತಾ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಅದಾನಿ ಗ್ರೂಪ್ ಹೈಫಾ ಬಂದರನ್ನು ತನಗೆ ಅಗತ್ಯವಿರುವಂತೆ ಮಾಡುವ ಮತ್ತು ಇಸ್ರೇಲ್ - ಭಾರತದ ನಡುವೆ ವ್ಯಾಪಾರವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಗಿಲೋನ್ ಹೇಳಿದರು.
ಅದಾನಿ ಗ್ರೂಪ್ ಇಸ್ರೇಲ್‌ನಲ್ಲಿ ಹೆಚ್ಚಿನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದೆ ಎಂದು ಇಸ್ರೇಲ್ ರಾಯಭಾರಿ ಬಹಿರಂಗಪಡಿಸಿದರು. ಅದಾನಿ ಸಮೂಹಕ್ಕೆ ಇಸ್ರೇಲ್‌ನಲ್ಲಿ ಯಶಸ್ಸು ಸಿಗಲಿ ಎಂದು ತಾವು ನಿರೀಕ್ಷಿಸುವುದಾಗಿ ಅವರು ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಿಲೋನ್, ನಾವು ನಮ್ಮ ಬಂದರನ್ನು ಭಾರತೀಯ ಕಂಪನಿಗೆ ನೀಡುತ್ತಿರುವುದು ಭಾರತದೊಂದಿಗೆ ನಮ್ಮ ಆಳವಾದ ನಂಬಿಕೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಅದಾನಿ ಗ್ರೂಪ್ ಇಸ್ರೇಲ್‌ನಲ್ಲಿ ಹೆಚ್ಚಿನ ಪ್ರಾಜೆಕ್ಟ್‌ಗಳನ್ನು ಹುಡುಕುತ್ತಿದೆ ಎಂದು ಅವರು ಹೇಳಿದರು. ನಾವು ಟಾಟಾ, ಕಲ್ಯಾಣಿ, ಬಿಎಚ್‌ಇಎಲ್ ಸೇರಿದಂತೆ ಭಾರತೀಯ ಕಂಪನಿಗಳೊಂದಿಗೆ ಸುಮಾರು 80 ಜಂಟಿ ಉದ್ಯಮಗಳನ್ನು ಹೊಂದಿದ್ದೇವೆ. ಬಂದರುಗಳು ಅದಾನಿ ಗ್ರೂಪ್‌ನ ಪ್ರಮುಖ ವ್ಯವಹಾರವಾಗಿದೆ ಎಂದರು.
ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ವಿಷಯದ ಕುರಿತು ಮಾತನಾಡಿದ ಗಿಲೋನ್, ಭಾರತ ಮತ್ತು ಇಸ್ರೇಲ್ ಎರಡೂ ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಉತ್ಸುಕವಾಗಿವೆ. ಇದು ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸಬಹುದು ಎಂದರು. ಭಾರತವು ಪ್ರಾದೇಶಿಕ ಸೂಪರ್ ಪವರ್‌ನಿಂದ ಜಾಗತಿಕ ಸೂಪರ್ ಪವರ್ ಆಗುವ ಹಾದಿಯಲ್ಲಿದೆ ಎಂದು ಅವರು ಶ್ಲಾಘಿಸಿದರು. ನಮ್ಮ ಸ್ನೇಹಿತರು ನಮಗೆ ಹತ್ತಿರವಾಗಬೇಕೆಂದು ನಾವು ಬಯಸುತ್ತೇವೆ. ನಾವು ಭಾರತದೊಂದಿಗೆ ತುಂಬಾ ಆರಾಮದಾಯಕವಾಗಿದ್ದೇವೆ. ನಾನು ಮೊದಲೇ ಹೇಳಿದಂತೆ, ಇಸ್ರೇಲ್‌ನಲ್ಲಿ ಭಾರತೀಯ ನಿಯಂತ್ರಿತ ಬಂದರುಗಳನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸೆಂಟರ್ ಆಫ್ ಎಕ್ಸಲೆನ್ಸ್ ಬಗ್ಗೆ ಮಾತನಾಡಿದ ಅವರು, ನಾವು ನಮ್ಮ ರಾಜತಾಂತ್ರಿಕ ಸಂಬಂಧದ 30 ವರ್ಷಗಳನ್ನು ಪೂರೈಸಿದ್ದೇವೆ ಮತ್ತು ಇತ್ತೀಚೆಗೆ ಕೃಷಿಯ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನು ಉದ್ಘಾಟಿಸಿದ್ದೇವೆ ಎಂದರು. ಅದಾನಿ ಗ್ರೂಪ್ 1.2 ಬಿಲಿಯನ್ ಡಾಲರ್ ಪಾವತಿಸಿ ಇಸ್ರೇಲಿ ಬಂದರು ಹೈಫಾವನ್ನು ಸ್ವಾಧೀನಪಡಿಸಿಕೊಂಡಿದೆ. ಟೆಲ್ ಅವೀವ್‌ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವನ್ನು ಕೂಡ ಅದಾನಿ ಆರಂಭಿಸಲಿದೆ.
ನಾವು ಇನ್ನೂ ಹತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲಿದ್ದೇವೆ ಮತ್ತು ಭವಿಷ್ಯದಲ್ಲಿ ಅವುಗಳ ಸಂಖ್ಯೆ ಮತ್ತೂ ಹೆಚ್ಚಾಗಲಿದೆ. ಸದ್ಯ ಹರಿಯಾಣದ ಕರ್ನಾಲ್‌ನಲ್ಲಿ ಕೃಷಿ ಸೆಂಟರ್ ಆಫ್ ಎಕ್ಸಲೆನ್ಸ್ ಇದೆ. ಈ ಸೆಂಟರ್ ಆಫ್ ಎಕ್ಸಲೆನ್ಸ್ಗಳು ರೈತರಿಗೆ ಅವರ ಸಾಮರ್ಥ್ಯಕ್ಕೆ ಹೊಂದಿಕೊಳ್ಳುವ ತಂತ್ರಜ್ಞಾನಗಳನ್ನು ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿವೆ ಎಂದು ರಾಯಭಾರಿ ನೌರ್ ಗಿಲೋನ್ ತಿಳಿಸಿದರು.
ಇದನ್ನೂ ಓದಿ: ಚುನಾವಣಾ ವ್ಯವಸ್ಥೆ ಮೇಲೆ ಇಸ್ರೇಲ್ ಸಂಸ್ಥೆ ಪ್ರಭಾವ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ