ನವದೆಹಲಿ :ಹಿಂಡೆನ್‌ಬರ್ಗ್ ವರದಿಯು ಅದಾನಿ ಸಮೂಹದ ಸಾಮ್ರಾಜ್ಯದ ಮೇಲೆ ಬಹಳ ದೊಡ್ಡ ಪ್ರಮಾಣದ ಪರಿಣಾಮ ಬೀರಿದೆ. ಈ ವರದಿಯ ಕಾರಣದಿಂದ ಕಂಪನಿಯ ತನ್ನ ಭವಿಷ್ಯದ ಹಲವಾರು ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಯಿತು. ಹೀಗೆ ಅದಾನಿ ರದ್ದುಗೊಳಿಸುತ್ತಿರುವ ಯೋಜನೆಗಳ ಸರಣಿಗೆ ಮತ್ತೊಂದು ಯೋಜನೆ ಸೇರಿಕೊಂಡಿದೆ. ಇದೀಗ ಅದಾನಿ ಸಮೂಹವು ಮ್ಯಾಕ್ವಾರಿಯಿಂದ ರಸ್ತೆ ಆಸ್ತಿಗಳನ್ನು ಖರೀದಿಸುವ ತನ್ನ ಉದ್ದೇಶಿತ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದೆ.
ಒಪ್ಪಂದ ರದ್ದಾಗಲು ಕಾರಣ?: ಅದಾನಿ ರೋಡ್ಸ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಆಸ್ಟ್ರೇಲಿಯಾದ ಹೂಡಿಕೆದಾರ ಮ್ಯಾಕ್ವಾರಿಯಿಂದ ನಾಲ್ಕು ರಸ್ತೆ ಆಸ್ತಿಗಳನ್ನು ಖರೀದಿಸಲು ಮುಂದಾಗಿತ್ತು. ಇದು 2022 ರಲ್ಲಿ ಆಗಿದ್ದ 3,110 ಕೋಟಿ ರೂ.ಗಳ ಒಪ್ಪಂದವಾಗಿತ್ತು. ಆದರೆ, ಈ ಒಪ್ಪಂದ ಇನ್ನು ಜಾರಿಯಾಗುವುದಿಲ್ಲ. ಅದಾನಿ ಗ್ರೂಪ್ ಸದ್ಯ ಈ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಷೇರು ಖರೀದಿ ಒಪ್ಪಂದದ ಪ್ರಕಾರ ನಿಗದಿತ ಸಮಯದೊಳಗೆ ಮುಕ್ತಾಯದ ಷರತ್ತುಗಳನ್ನು ಮ್ಯಾಕ್ವಾರಿ ತೃಪ್ತಿಕರವಾಗಿ ಪೂರೈಸಲಿಲ್ಲ ಎಂಬ ಕಾರಣಕ್ಕೆ ಒಪ್ಪಂದ ರದ್ದುಪಡಿಸಲಾಗಿದೆ ಎಂದು ಅದಾನಿ ಹೇಳಿದೆ. ಇದರಿಂದಾಗಿ ಖರೀದಿದಾರ ಅಂದರೆ ಅದಾನಿ ಗ್ರೂಪ್ ಷೇರು ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ.
ಕಳೆದ ವರ್ಷವೇ ಆಗಿತ್ತು ಒಪ್ಪಂದ: ವಾಸ್ತವದಲ್ಲಿ ಅದಾನಿ ರೋಡ್ಸ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಸ್ವರ್ಣ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನಲ್ಲಿ ಶೇಕಡಾ 100 ರಷ್ಟು ಪಾಲನ್ನು ಮತ್ತು ಗುಜರಾತ್ ರೋಡ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಲಿಮಿಟೆಡ್‌ನಲ್ಲಿ ಶೇಕಡಾ 56.8 ರಷ್ಟು ಪಾಲನ್ನು ಪಡೆಯಲು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವನ್ನು 4 ಆಗಸ್ಟ್ 2022 ರಂದು ಮಾಡಲಾಗಿತ್ತು. ಈ ಎರಡು ಕಂಪನಿಗಳು ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ 2 ಟೋಲ್ ರಸ್ತೆ ಯೋಜನೆಗಳನ್ನು ಹೊಂದಿವೆ ಎಂಬುದು ಗಮನಾರ್ಹ.