ಮುಂಬೈ (ಮಹಾರಾಷ್ಟ್ರ):ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್ಬರ್ಗ್ ಆರೋಪದ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದ್ದ ಅದಾನಿ ಗ್ರೂಪ್ ಸಂಸ್ಥೆಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಚೇತರಿಸಿಕೊಂಡಿವೆ. ಆದಾಗ್ಯೂ, ಇತರ ಸಮೂಹ ಸಂಸ್ಥೆಗಳಾದ ಅದಾನಿ ಟ್ರಾನ್ಸ್ಮಿಷನ್, ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಸೇರಿ ಕೆಲ ಸಂಸ್ಥೆಗಳು ನಷ್ಟದಲ್ಲೇ ಮುಂದುವರಿದಿವೆ.
ಅದಾನಿ ಎಂಟರ್ಪ್ರೈಸಸ್ನ ಷೇರುಗಳು ಹಿಂದಿನ ವಹಿವಾಟಿಗೆ ಹೋಲಿಸಿದರೆ ಇಂದು ಬೆಳಗ್ಗೆ 10.30 ಕ್ಕೆ ಶೇ. 5.10 ಅಂದರೆ, 140 ಕೋಟಿ ರೂಪಾಯಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಕಳೆದ ವಾರದಲ್ಲಿ ಗ್ರೂಪ್ ಶೇ 15.20 ಕ್ಕಿಂತ ಹೆಚ್ಚು ನಷ್ಟವನ್ನು ಅನುಭವಿಸಿದೆ. ಹಿಂದಿನ ನಷ್ಟದ ಹೊರೆಯೊಂದಿಗೆ ದಿನದ ವಹಿವಾಟು ಆರಂಭವಾದಾಗ ಬೆಳಗ್ಗೆ 10.30ರ ವೇಳೆಗೆ ಅದಾನಿ ಪೋರ್ಟ್ ಷೇರುಗಳು 22 ರೂ. ಅಥವಾ ಶೇ.3.70ರಷ್ಟು ಏರಿಕೆ ದಾಖಲಿಸಿದವು.
ಹಿಂಡೆನ್ಬರ್ಗ್ ರಿಸರ್ಚ್ ವರದಿ ಹೇಳಿದ್ದೇನು?:ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್ ಬ್ಲ್ಯಾಟಂಟ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಈ ಆರೋಪದ ವರದಿಯ ನಂತರ, ಹಲವು ವ್ಯಾಪಾರ ಸಮೂಹದ ಕಂಪನಿಗಳ ಷೇರುಗಳಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡುಬಂದಿದೆ.
ಅದಾನಿ ಸಂಸ್ಥೆಯ ತೀಕ್ಷ್ಣ ಉತ್ತರ:ಹಿಂಡನ್ಬರ್ಗ್ ವರದಿಗೆ ತೀಕ್ಷ್ಣವಾಗಿ ಉತ್ತರಿಸಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಆದಾನಿ ಮಾಲಿಕತ್ವದ ಅದಾನಿ ಸಮೂಹ, "ಇದು ಕೇವಲ ಕಂಪನಿಯೊಂದರ ಮೇಲಿನ ದಾಳಿಯಲ್ಲ, ದೇಶದ ಮೇಲಿನ ಯೋಜಿತ ದಾಳಿʼʼ ಎಂದಿದೆ. 88 ಪ್ರಶ್ನೆಗಳಲ್ಲಿ 62 ಪ್ರಶ್ನೆಗಳಿಗೆ ಉತ್ತರ ನೀಡಲು ಅದಾನಿ ಗ್ರೂಪ್ ವಿಫಲವಾಗಿದೆ ಎಂದು ಹಿಂಡೆನ್ಬರ್ಗ್ ತಿಳಿಸಿತ್ತು. ಇದಕ್ಕೆ ಉತ್ತರ ರೂಪವಾಗಿ 413 ಪುಟಗಳ ದಾಖಲೆಯನ್ನು ಅದಾನಿ ಗ್ರೂಪ್ ಬಿಡುಗಡೆ ಮಾಡಿತ್ತು.