ನವದೆಹಲಿ:ಖ್ಯಾತ ಉದ್ಯಮಿ ಗೌತಮ್ ಅದಾನಿ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ವ್ಯವಹಾರ ವಿಸ್ತರಿಸುತ್ತಿದ್ದಾರೆ. ಇತ್ತೀಚೆಗೆ ಅದಾನಿ ನ್ಯೂಸ್ ಏಜೆನ್ಸಿ ಐಎಎನ್‌ಎಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬಹುಪಾಲು ಷೇರುಗಳನ್ನು ಖರೀದಿಸಿದ್ದಾರೆ. ಖರೀದಿ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ. ಅದಾನಿ ಗ್ರೂಪ್‌ನ ಅಂಗ ಸಂಸ್ಥೆಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಮೂಲಕ 50.50 ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿದೆ ಎಂದು ಅದಾನಿ ಗ್ರೂಪ್ ತಿಳಿಸಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ ವ್ಯಾಪಾರ ಮತ್ತು ಹಣಕಾಸು ಸುದ್ದಿಗಳನ್ನು ಒದಗಿಸುವ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾ ಖರೀದಿಯೊಂದಿಗೆ ಅದಾನಿ ಗ್ರೂಪ್ ಮಾಧ್ಯಮ ಕ್ಷೇತ್ರ ಪ್ರವೇಶಿಸಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಅದಾನಿ ಗ್ರೂಪ್ ಎನ್‌ಡಿಟಿವಿಯಲ್ಲಿ ಶೇಕಡಾ 65ರಷ್ಟು ಪಾಲು ಪಡೆದುಕೊಂಡಿದೆ.
ಇತ್ತೀಚೆಗೆ, ಅದಾನಿ ಸಮೂಹ ಸಂಸ್ಥೆಯು ಐಎಎನ್‌ಎಸ್ ಸುದ್ದಿ ಸಂಸ್ಥೆಯಲ್ಲಿ ಹೆಚ್ಚಿನ ಪಾಲು ಖರೀದಿಸಿದೆ. 2022 - 23ರ ಹಣಕಾಸು ವರ್ಷದಲ್ಲಿ ಐಎಎನ್‌ಎಸ್‌ನ ಆದಾಯ 11.86 ಕೋಟಿ ರೂ. ಇದೆ. ಐಎಎನ್‌ಎಸ್‌ಗೆ ಸಂಬಂಧಿಸಿದಂತೆ ತನ್ನ ಪರಸ್ಪರ ಹಕ್ಕುಗಳನ್ನು ದಾಖಲಿಸಲು ಐಎಎನ್‌ಎಸ್ ಮತ್ತು ಸಂದೀಪ್ ಬಾಮ್‌ಜಾಯ್ ಸೇರಿದಂತೆ ಷೇರುದಾರರ ಒಪ್ಪಂದಕ್ಕೆ ಎಎಂಎನ್‌ಎಲ್ ಸಹಿ ಮಾಡಿದೆ. ಐಎಎನ್‌ಎಸ್‌ನ ಎಲ್ಲ ಕಾರ್ಯಾಚರಣೆ ಮತ್ತು ನಿರ್ವಹಣಾ ನಿಯಂತ್ರಣವು ಎಎಂಎನ್‌ಎಲ್ ಜೊತೆಗೆ ಇರುತ್ತದೆ. ಜೊತೆಗೆ ಐಎಎನ್‌ಎಸ್‌ನ ಎಲ್ಲ ನಿರ್ದೇಶಕರನ್ನು ನೇಮಿಸುವ ಹಕ್ಕನ್ನು ಎಎಂಎನ್‌ಎಲ್ ಹೊಂದಿರುತ್ತದೆ.