ನವದೆಹಲಿ : ಐಟಿ ಸೇವೆ ಮತ್ತು ಸಲಹಾ ಸಂಸ್ಥೆಯಾಗಿರುವ ಆಕ್ಸೆಂಚರ್ ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ ತನ್ನ ಶೇ 2.5 ರಷ್ಟು ಅಥವಾ 19,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಆಕ್ಸೆಂಚರ್ನಲ್ಲಿ ಪ್ರಸ್ತುತ 7 ಲಕ್ಷಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 3 ಲಕ್ಷ ಜನ ಉದ್ಯೋಗಿಗಳು ಭಾರತದಲ್ಲಿಯೇ ಇದ್ದಾರೆ.
2023 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಾವು ವಿಶೇಷವಾಗಿ ನಮ್ಮ ಕಾರ್ಯತಂತ್ರದ ಬೆಳವಣಿಗೆಯ ಆದ್ಯತೆಗಳನ್ನು ಬೆಂಬಲಿಸಲು ನೇಮಕಾತಿಗಳನ್ನು ಮುಂದುವರಿಸಿದ್ದೇವೆ. ಆದರೆ ಅದೇ ಸಮಯದಲ್ಲಿ ಕಂಪನಿಯ ಕಾರ್ಯಕಲಾಪಗಳನ್ನು ಸುಗಮಗೊಳಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಕೂಡ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇದರ ಅಂಗವಾಗಿ ಮುಂದಿನ 18 ತಿಂಗಳುಗಳಲ್ಲಿ ಸರಿಸುಮಾರು 19,000 ಜನರನ್ನು (ಅಥವಾ ನಮ್ಮ ಪ್ರಸ್ತುತ ಉದ್ಯೋಗಿಗಳ ಶೇಕಡಾ 2.5) ಕೆಲಸದಿಂದ ವಜಾಗೊಳಿಸಬಹುದು ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಈ ಕಡಿತದಲ್ಲಿ ಅರ್ಧದಷ್ಟು ಜನರು ಆಕ್ಸೆಂಚರ್ನ ಬಿಲ್ ಮಾಡಲಾಗದ ಕಾರ್ಪೊರೇಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಜನರನ್ನು ಒಳಗೊಂಡಿರುತ್ತದೆ ಎಂದು ಫೈಲಿಂಗ್ ಹೇಳಿದೆ.
ಅಮೆಜಾನ್ನಲ್ಲಿ ಮತ್ತೆ ದೊಡ್ಡ ಪ್ರಮಾಣದ ಉದ್ಯೋಗ ಕಡಿತ : ಕೆಲ ತಿಂಗಳ ಹಿಂದೆ ಅತಿದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದ್ದ ಅಮೆಜಾನ್ ಈಗ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಮುಂದಿನ ಕೆಲ ವಾರಗಳಲ್ಲಿ ಮತ್ತೆ 9 ಸಾವಿರ ಜನರನ್ನು ವಜಾಗೊಳಿಸಲಿರುವುದಾಗಿ ಅಮೆಜಾನ್ ಸೋಮವಾರ ಹೇಳಿದೆ. ಅಲ್ಲಿಗೆ 2023 ರಲ್ಲಿ ಅಮೆಜಾನ್ ಒಟ್ಟು 27 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದಂತಾಗಲಿದೆ.