ಕಣ್ಣೂರು( ಕೇರಳ): ಇಂದು ಎಲ್ಲಕಡೆ ಕಲಬೆರೆಕೆಯದ್ದೇ ಮಾತು.. ವ್ಯವಹಾರಗಳು ಬೆಳದಂತೆ ಲಾಭಕ್ಕಾಗಿ ತಿನ್ನುವ ವಸ್ತುಗಳ ಕಲಬೆರಕೆ ಕಾಮನ್ ಎನ್ನುವಂತಾಗಿದೆ. ಹಲವು ಬ್ರಾಂಡ್ಗಳ ವಿರುದ್ಧ ಇಂತಹ ವ್ಯಾಪಕ ಆರೋಪಗಳು ಕೇಳಿ ಬರುತ್ತಲೇ ಇವೆ.
ಇಂತಹ ಕಲಬೆರೆಕೆ ವಸ್ತುಗಳ ಬಗ್ಗೆ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿನ ಲಿಯೊನಾರ್ಡೊ ಡೊ ಜಾನ್, ತಮ್ಮ ಹೋರಾಟಕ್ಕಾಗಿ ತಮ್ಮ ಜೀವನಕ್ಕೆ ಆಸರೆಯಾಗಿರುವ 3 ಎಕರೆ ಆಸ್ತಿಯನ್ನು ಮಾರಿ 30 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿದ್ದಾರೆ. ದೇಶಾದ್ಯಂತ 2000ಕ್ಕೂ ಹೆಚ್ಚು ರಾಜ್ಯ ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳಲ್ಲಿ ಆರ್‌ಟಿಐ ಅರ್ಜಿ ಸಲ್ಲಿಸಿ 400ಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ತಿನ್ನುವ ಅನ್ನಕ್ಕೆ ವಿಷ ಸೇರಿಸುವ ಇಂತಹ ಉದ್ಯಮಗಳು ಬ್ಯಾಂಡ್ಗಳು ಸೇರಿದಂತೆ ಕಲಬೆರೆಕೆ ಮಾಡುವವರ ವಿರುದ್ಧ ಹೋರಾಟ ನಡೆಸಿದ್ದಾರೆ. ಕಳೆದ 12 ವರ್ಷಗಳಿಂದ ಆಹಾರ ಪದಾರ್ಥಗಳ ಕಲಬೆರಕೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಣ್ಣೂರಿನವರಾದ ಲಿಯೊನಾರ್ಡೊ ಡೊ ಜಾನ್, ದಾಲ್ಚಿನ್ನಿ, ಕ್ಯಾಸಿಯಾ, ಮೆಣಸಿನ ಪುಡಿ ಮತ್ತು ಎಥಿಯೋನ್ ಕೀಟನಾಶಕಗಳ ಕಲಬೆರಕೆ ವಿರುದ್ಧ ತಮ್ಮ ಹೋರಾಟ ನಡೆಸುತ್ತಿದ್ದಾರೆ.
ಇವರ ಹೋರಾಟ ಆರಂಭವಾಗಿದ್ದು ಹೇಗೆ?:12 ವರ್ಷಗಳ ಹಿಂದೆ ಲಿವರ್ ಸಿರೋಸಿಸ್ ನಿಂದ ತಮ್ಮ ಆತ್ಮೀಯ ಸ್ನೇಹಿತ ನಿಧನರಾದರು. ಕ್ಯಾಸಿಯಾ ಮತ್ತು ದಾಲ್ಚಿನ್ನಿ ಮಿಶ್ರಣದಿಂದ ಮಾಡಿದ ಆಯುರ್ವೇದ ಮಿಶ್ರಣವು ತನ್ನ ಸ್ನೇಹಿತನ ಜೀವವನ್ನು ತೆಗೆದುಕೊಂಡಿತು ಎಂಬ ಕಾರಣವನ್ನು ವೈದ್ಯರ ಮೂಲಕ ಅರಿತುಕೊಂಡ ಜಾನ್ ಅವತ್ತೇ ಹೋರಾಟಕ್ಕೆ ತೀರ್ಮಾನಿಸಿದ್ದರು. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿದ್ದು ಅವರ ತಾಯಿ ಕ್ಯಾನ್ಸರ್‌ಗೆ ಬಲಿಯಾದಾಗ. ತಾಯಿ ಕಳೆದುಕೊಂಡ ಮೇಲೆ ಜಾನ್ ಆಹಾರ ಕಲಬೆರಕೆ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದರು.
ಕ್ಯಾನ್ಸರ್ ಎಂಬ ಮಹಾಮಾರಿ:ತಿನ್ನುವ ಪದಾರ್ಥದಲ್ಲಿಕಲಬೆರಕೆ ಮಾಡುವುದರಿಂದ ಅನೇಕ ಹೊಸ ಕ್ಯಾನ್ಸರ್ ರೋಗಿಗಳು ಸೃಷ್ಟಿಯಾಗುತ್ತಾರೆ. ಈ ಮಾತಿಗೆ ಇಂಬು ನೀಡುವಂತೆ ಪ್ರಸ್ತುತ ಕೇರಳದಲ್ಲಿ 2.70 ಲಕ್ಷ ಕ್ಯಾನ್ಸರ್ ರೋಗಿಗಳಿದ್ದಾರೆ. ಇನ್ನೂ ಆಘಾತಕಾರಿ ವಿಷಯ ಎಂದರೆ ಪ್ರತಿ ವರ್ಷ 50,000 ಹೊಸ ಪ್ರಕರಣಗಳು ವರದಿಯಾಗುತ್ತಿರುವುದು.
ಕೇರಳವು ದೇಶದ ಅತಿ ಹೆಚ್ಚು ಕಿಡ್ನಿ ಮತ್ತು ಲಿವರ್ ರೋಗಿಗಳನ್ನು ಹೊಂದಿದೆ. ಎರ್ನಾಕುಲಂನ ಲೇಕ್‌ಶೋರ್ ಆಸ್ಪತ್ರೆಯು ಈ ಬಗ್ಗೆ ಹಲವಾರು ಅಧ್ಯಯನಗಳನ್ನು ಮಾಡಿದೆ. ಯಕೃತ್ತಿನ ರೋಗಗಳನ್ನು ಉಂಟು ಮಾಡುವ ಗಿಡಮೂಲಿಕೆಗಳ ಔಷಧಗಳ ಬಗ್ಗೆ 2016-17 ರಲ್ಲಿ 1440 ಗಂಭೀರ ಯಕೃತ್ತಿನ ಕಾಯಿಲೆಗಳನ್ನು ಹೊಂದಿರುವ ರೋಗಿಗಳ ಮೇಲೆ ಆಸ್ಪತ್ರೆ ತಜ್ಞರು ಅಧ್ಯಯನ ಕೈಗೊಂಡಿದ್ದರು. ಈ ಅಧ್ಯಯನದಲ್ಲಿ ಯಕೃತ್ತಿನ ಕಾಯಿಲೆಗೆ ಗಿಡಮೂಲಿಕೆ ಔಷಧಗಳೇ ಪ್ರಮುಖ ಕಾರಣ ಎಂಬುದನ್ನು ಸಂಶೋಧಕರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದರು.
ಗಿಡಮೂಲಿಕೆ ಔಷಧಗಳ ಕಲಬೆರಕೆ ವಿರುದ್ದ ಲಿಯೊನಾರ್ಡೊ ಡೊ ಜಾನ್ ಹೋರಾಟ:ಕೇರಳದ ಯಾವುದೇ ಆಯುರ್ವೇದ ಔಷಧ ಕಂಪನಿಗಳು ಕೀಟನಾಶಕಗಳ ಇರುವಿಕೆಯನ್ನು ಪರೀಕ್ಷಿಸಲು ಉಪಕರಣಗಳನ್ನು ಖರೀದಿಸಿಲ್ಲ. ಕೇರಳ ಆಯುರ್ವೇದ ಉದ್ಯಮವು ವರ್ಷಕ್ಕೆ 1000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂಬುದು ಗಮನಾರ್ಹ. ಈ ಬಗ್ಗೆ ಜಾನ್ ಖಚಿತ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಉದ್ಯಮಗಳು ಹೇಗೆಲ್ಲ ಕಲಬೆರಕೆ ಮಾಡಿ ಜನರಿಗೆ, ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂಬ ಬಗ್ಗೆ ಅವರು ಮಾತನಾಡಿದ್ದಾರೆ.