ನವದೆಹಲಿ : 20 ವರ್ಷಗಳ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ ಇಂದಿನ ಸಮಯದಲ್ಲಿ ಶೈಕ್ಷಣಿಕ ಡಿಗ್ರಿಗಳಿಗಿಂತ ಕೌಶಲಗಳು ಮುಖ್ಯ ಎಂದು ಭಾರತೀಯ ವೃತ್ತಿಪರರು ಹೇಳಿದ್ದಾರೆ. ಪ್ರತಿ 10 ವೃತ್ತಿಪರರ ಪೈಕಿ 8 ಜನ ಇದನ್ನು ಪ್ರತಿಪಾದಿಸಿದ್ದಾರೆ ಎಂದು ಶುಕ್ರವಾರ ಹೊಸ ವರದಿಯೊಂದು ತಿಳಿಸಿದೆ. ಪ್ರೊಫೆಷನಲ್ ಸೋಷಿಯಲ್ ನೆಟ್ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನ ಪ್ರಕಾರ, ಭಾರತೀಯ ವೃತ್ತಿಪರರು ಇಂದು ಹೊಸ ವೃತ್ತಿಜೀವನದ ಹಾದಿಯನ್ನು ರೂಪಿಸುವ ಮಾರ್ಗವಾಗಿ ಪದವಿಗಳಿಗಿಂತ ಕೌಶಲಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
20 ವರ್ಷಗಳ ಹಿಂದೆ ಉದ್ಯೋಗ ಪಡೆಯಬೇಕಾದರೆ ಪೂರ್ವಾಪೇಕ್ಷಿತವಾಗಿದ್ದ ಶೈಕ್ಷಣಿಕ ಪದವಿಗಳಿಗೆ ಈಗ ಕಡಿಮೆ ಪ್ರಾಮುಖ್ಯತೆ ಇದೆ ಎಂದು ಭಾರತದಲ್ಲಿನ ಸುಮಾರು ಶೇಕಡಾ 76 ರಷ್ಟು ವೃತ್ತಿಪರರು ಒಪ್ಪುತ್ತಾರೆ. "ವೃತ್ತಿಪರರು 20 ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಹೊಸ ಮನಸ್ಥಿತಿಯೊಂದಿಗೆ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಆದಾಗ್ಯೂ ಈಗಲೂ ಸಂಬಳವೇ ಪ್ರಮುಖ ಪರಿಗಣನೆಯಾಗಿದೆ. ಇಂದಿನ ವೃತ್ತಿಪರರು ವೃತ್ತಿಯ ತಿರುವುಗಳ ಮಧ್ಯೆ ತಾವು ನಂಬಿದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಲು ಬಯಸದೇ, ತಾವು ಯಾವಾಗ ಎಲ್ಲಿ ಹೇಗೆ ಕೆಲಸ ಮಾಡಬೇಕೆಂಬುದನ್ನು ತಾವೇ ನಿರ್ಧರಿಸಲು ಬಯಸುತ್ತಾರೆ ಎಂದು ಲಿಂಕ್ಡ್‌ಇನ್ ಇಂಡಿಯಾ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಹೇಳಿದರು.
ಉತ್ತಮ ಕೌಶಲ್ಯದ ಮೇಲೆ ನಿರಂತರ ಗಮನವನ್ನು ಹೊಂದಿರುವ ಬಲವಾದ ನೆಟ್‌ವರ್ಕ್ ಮತ್ತು ವೃತ್ತಿಪರ ಬ್ರ್ಯಾಂಡ್ ಅನ್ನು ನಿರ್ಮಿಸುವುದು, ಹೊಸ ಅವಕಾಶಗಳನ್ನು ಪಡೆಯುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಮುಖ್ಯವಾಗಿದೆ ಎಂದು ಅವರು ಹೇಳಿದರು. ಸೂಕ್ತ ಅನುಭವ ಇಲ್ಲವಾದರೂ ಕೆಲಸಕ್ಕೆ ಬೇಕಾದ ಕೌಶಲ ಇರುವ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈಗ ಕಂಪನಿಗಳು ಒಲವು ತೋರುತ್ತಿವೆ ಎಂದು ಶೇ 82ರಷ್ಟು ವೃತ್ತಿಪರರು ಹೇಳಿದ್ದಾರೆ. ಭವಿಷ್ಯದಲ್ಲಿ ಒಂದೇ ಕೌಶಲ ಹೊಂದಿರುವ ವ್ಯಕ್ತಿಗಳಿಗಿಂತ ವಿಭಿನ್ನ ಕೌಶಲಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಕಂಪನಿಗಳು ಆದ್ಯತೆ ನೀಡಲಿವೆ ಎಂದು ಬಹುಪಾಲು ವೃತ್ತಿಪರರ (ಶೇಕಡಾ 84) ಅಭಿಪ್ರಾಯವಾಗಿದೆ.