ನವದೆಹಲಿ : ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇಕಡಾ 5 ರಷ್ಟು ಕಡಿತಗೊಳಿಸಿದೆ. ಇದರಿಂದ ಈ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಲಿದ್ದು, ಗ್ರಾಹಕರಿಗೆ ಲಾಭವಾಗಬಹುದು. ಗುರುವಾರದಿಂದಲೇ ಆಮದು ಸುಂಕ ಕಡಿತ ಜಾರಿಗೆ ಬರಲಿದೆ. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 17.5 ರಿಂದ ಶೇಕಡಾ 12.5 ಕ್ಕೆ ಇಳಿಸಲಾಗಿದೆ. ಈ ಕ್ರಮವು ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆಗಳನ್ನು ಕಡಿಮೆ ಮಾಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಮುಂದುವರಿದ ಭಾಗವಾಗಿದೆ.
ಮೂಲ ಆಮದು ಸುಂಕವು ಖಾದ್ಯ ತೈಲಗಳ ಮೂಲ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಈ ಪದಾರ್ಥಗಳ ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.
2021 ರ ಅಕ್ಟೋಬರ್‌ನಲ್ಲಿ ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕೊನೆಯದಾಗಿ ಶೇಕಡಾ 32.5 ರಿಂದ 17.5 ಕ್ಕೆ ಇಳಿಸಲಾಗಿತ್ತು. 2021 ರಲ್ಲಿ ಅಂತರರಾಷ್ಟ್ರೀಯ ಬೆಲೆಗಳು ತುಂಬಾ ಹೆಚ್ಚಾಗಿದ್ದರಿಂದ ಸುಂಕ ಕಡಿತಗೊಳಿಸಲಾಗಿತ್ತು.
ಮುಕ್ತ ಮಾರುಕಟ್ಟೆ ಯೋಜನೆಯಡಿ ಅಕ್ಕಿ, ಗೋಧಿ ಮಾರಾಟ ಸ್ಥಗಿತ: ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ಕೇಂದ್ರದ ಪೂಲ್‌ನಿಂದ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟವನ್ನು ನಿಲ್ಲಿಸಲು ಕೇಂದ್ರವು ನಿರ್ಧರಿಸಿದೆ. ಈ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿರುವ ರಾಜ್ಯಗಳ ಮೇಲೆ ಇದು ಪರಿಣಾಮ ಬೀರಬಹುದು.
ಒಎಂಎಸ್‌ಎಸ್ (ದೇಶೀಯ) ಅಡಿಯಲ್ಲಿ ಗೋಧಿ ಮತ್ತು ಅಕ್ಕಿಯನ್ನು ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಈಶಾನ್ಯ ರಾಜ್ಯಗಳು, ಗುಡ್ಡಗಾಡು ರಾಜ್ಯಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಪ್ರಸ್ತುತ ಕ್ವಿಂಟಲ್‌ಗೆ 3,400 ರೂ ದರದಲ್ಲಿ ಒಎಂಎಸ್‌ಎಸ್ ಅಡಿಯಲ್ಲಿ ಅಕ್ಕಿ ಮಾರಾಟವನ್ನು ಮುಂದುವರಿಸಲಾಗುವುದು ಎಂದು ಅದು ಹೇಳಿದೆ.
ಗೋಧಿ ಬೆಲೆಯನ್ನು ನಿಯಂತ್ರಿಸಲು ಜೂನ್ 12 ರಂದು ಕೇಂದ್ರವು ಮಾರ್ಚ್ 31, 2024 ರವರೆಗೆ ಸರಕುಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಿದೆ. ಮುಕ್ತ ಮಾರುಕಟ್ಟೆಯ ಬೆಲೆಗಳನ್ನು ತಗ್ಗಿಸಲು ಮತ್ತು ಸಂಗ್ರಹಣೆಯನ್ನು ತಡೆಯಲು OMSS ಅಡಿಯಲ್ಲಿ ಅಕ್ಕಿ ಮತ್ತು ಗೋಧಿ ಎರಡನ್ನೂ ಆಫ್‌ಲೋಡ್ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ : Monsoon 2023: ಈ ವರ್ಷ ಸಾಮಾನ್ಯ ಮುಂಗಾರು; AI/ML ಮಾಡೆಲ್ನಿಂದ ಮುನ್ಸೂಚನೆ