ಕರ್ನಾಟಕ

karnataka

ETV Bharat / business

ಬಿಲ್​ಗೇಟ್ಸ್​​​​​ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ - ಈಟಿವಿ ಭಾರತ ಕನ್ನಡ

ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

Oracle founder Larry Ellison now world's 4th richest person
Oracle founder Larry Ellison now world's 4th richest person

By

Published : Jun 13, 2023, 12:27 PM IST

ನ್ಯೂಯಾರ್ಕ್ (ಅಮೆರಿಕ):ಒರಾಕಲ್ (Oracle) ಸಂಸ್ಥಾಪಕ ಲ್ಯಾರಿ ಎಲಿಸನ್ ಅವರು ಕೃತಕ ಬುದ್ಧಿಮತ್ತೆಯ ಜನಪ್ರಿಯತೆಯ ಲಾಭ ಪಡೆಯುತ್ತಿದ್ದಾರೆ. ಇದೇ ಲಾಭದ ಕಾರಣದಿಂದ ಅವರು ಸದ್ಯ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಎಲಿಸನ್ ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದು, 129.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎಲಿಸನ್ ಈಗ ಗೇಟ್ಸ್ ಅವರನ್ನು ಹಿಂದೆ ಹಾಕಿದ್ದಾರೆ. ಗೇಟ್ಸ್​ ಅವರ ಸಂಪತ್ತಿನ ನಿವ್ವಳ ಮೌಲ್ಯ ಪ್ರಸ್ತುತ 129.1 ಬಿಲಿಯನ್ ಡಾಲರ್ ಆಗಿದೆ. ಎಲಿಸನ್ ಇದೇ ಮೊದಲ ಬಾರಿಗೆ ಶ್ರೀಮಂತರ ಪಟ್ಟಿಯಲ್ಲಿ ಗೇಟ್ಸ್‌ಗಿಂತ ಮೇಲಿದ್ದಾರೆ.

2014 ರಲ್ಲಿ ಒರಾಕಲ್ ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಎಲಿಸನ್ ಘೋಷಿಸಿದ್ದರು. ಆದಾಗ್ಯೂ ಅವರು ಕಂಪನಿಯನ್ನು ತೊರೆಯಲಿಲ್ಲ. ನಂತರ ಅವರು ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾದರು ಮತ್ತು ಅದೇ ಸ್ಥಾನದ ಬಲದಿಂದ ಅವರು ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ್ದಾರೆ.

ಒರಾಕಲ್‌ನ ಷೇರುಗಳು ಈ ವರ್ಷದಲ್ಲಿ ಇಲ್ಲಿಯವರೆಗೆ ಶೇಕಡಾ 42 ಕ್ಕಿಂತ ಹೆಚ್ಚು ಏರಿಕೆಯಾಗಿವೆ ಮತ್ತು ಪ್ರಸ್ತುತ ಸೋಮವಾರ ಮಾರುಕಟ್ಟೆಯ ಮುಕ್ತಾಯದ ಅವಧಿಯಲ್ಲಿ 116.50 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿವೆ. ಮಂಗಳವಾರ ಬಿಡುಗಡೆಯಾದ ಕಂಪನಿ ಗಳಿಕೆಯ ವರದಿಯ ಪ್ರಕಾರ, 2023 ರ ಆರ್ಥಿಕ ವರ್ಷದಲ್ಲಿ ಒರಾಕಲ್ $ 50 ಶತಕೋಟಿ ಆದಾಯವನ್ನು ಗಳಿಸಿದೆ.

ಕಂಪನಿಯ ಮೂಲಸೌಕರ್ಯ ವ್ಯವಹಾರ ಮತ್ತು ಕ್ಲೌಡ್ ಸೇವೆಗಳು ಬೆಳವಣಿಗೆಗೆ ಕಾರಣವಾಗಿವೆ ಎಂದು ಸಿಇಒ ಸಫ್ರಾ ಕ್ಯಾಟ್ಜ್ ಹೇಳಿದ್ದಾರೆ. ವರದಿಗಳ ಪ್ರಕಾರ, ಒರಾಕಲ್ AI ನಿಂದ ಬಾರಿ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. OpenAI ನ ಪ್ರತಿಸ್ಪರ್ಧಿ ಕಂಪನಿಯಾಗಿರುವ ಕೊಹೆರ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಒರಾಕಲ್ ಸಾಕಷ್ಟು ಲಾಭ ಗಳಿಸಿದೆ. ಕೊಹೆರ್ ಕಳೆದ ವಾರದ ಫಂಡಿಂಗ್ ಸುತ್ತಿನಲ್ಲಿ ಒಟ್ಟು 270 ಮಿಲಿಯನ್ ಡಾಲರ್ ಸಂಗ್ರಹಿಸಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಹೂಡಿಕೆದಾರರು ಆಶಾವಾದಿಯಾಗಿದ್ದಾರೆ. ಹೂಡಿಕೆದಾರರು ಎಐ ಗೆ ಸಂಬಂಧಿಸಿದ ವಲಯದಲ್ಲಿಯೇ ಹೆಚ್ಚು ಹೂಡಿಕೆ ಮಾಡುತ್ತಿರುವುದರಿಂದ S&P 500 ಸೂಚ್ಯಂಕ ಉನ್ನತ ಮಟ್ಟಕ್ಕೇರಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಎಲಿಸನ್ ಒರಾಕಲ್‌ನಲ್ಲಿ ಅತಿ ದೊಡ್ಡ ಷೇರುದಾರರಾಗಿದ್ದಾರೆ ಮತ್ತು ಅದರ ಸುಮಾರು 42.9 ಶೇಕಡಾ ಷೇರುಗಳನ್ನು ಹೊಂದಿದ್ದಾರೆ. 78 ವರ್ಷ ವಯಸ್ಸಿನ ಎಲಿಸನ್ ಟೆಸ್ಲಾದಲ್ಲಿ 1.5 ಶೇಕಡಾ ಪಾಲನ್ನು ಹೊಂದಿದ್ದಾರೆ.

ಒರಾಕಲ್ ಎಂಬುದು ಒರಾಕಲ್ ಕಾರ್ಪೊರೇಶನ್‌ನ ಉತ್ಪನ್ನವಾಗಿದ್ದು ಅದು ಸಂಬಂಧಿತ ಡೇಟಾಬೇಸ್ ನಿರ್ವಹಣಾ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರ RDBMS ಯಾವುದೇ ರೀತಿಯ ಡೇಟಾ ಮಾದರಿಯನ್ನು ಬೆಂಬಲಿಸುತ್ತದೆ. ಇದು ಸ್ಟ್ಯಾಂಡರ್ಡ್ ಆವೃತ್ತಿ, ಎಂಟರ್‌ಪ್ರೈಸ್ ಆವೃತ್ತಿ, ಎಕ್ಸ್‌ಪ್ರೆಸ್ ಆವೃತ್ತಿ ಮತ್ತು ವೈಯಕ್ತಿಕ ಆವೃತ್ತಿ ಸೇರಿದಂತೆ ವಿಭಿನ್ನ ಉತ್ಪನ್ನ ಆವೃತ್ತಿಗಳನ್ನು ಹೊಂದಿದೆ.

ಇದನ್ನೂ ಓದಿ : AI safety: AI ನಿಂದ ಅಪಾಯ: ವರ್ಷಾಂತ್ಯಕ್ಕೆ ಜಾಗತಿಕ ಎಐ ಸುರಕ್ಷತಾ ಶೃಂಗಸಭೆ

ABOUT THE AUTHOR

...view details