ನವದೆಹಲಿ :ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ಮೇ ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ 43,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಇದು ಎಫ್‌ಪಿಐಗಳಿಂದ ಒಂಬತ್ತು ತಿಂಗಳಲ್ಲೇ ಅತಿ ಹೆಚ್ಚು ಹೂಡಿಕೆಯಾಗಿದೆ. ವಿದೇಶಿ ಹೂಡಿಕೆದಾರರು ಹಣಕಾಸು ಸೇವೆಗಳನ್ನು ನೀಡುವ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡಿದ್ದು ಮಾತ್ರವಲ್ಲದೆ ಇತರ ಅನೇಕ ವಲಯಗಳ ಷೇರುಗಳಲ್ಲೂ ಬಂಡವಾಳ ಹೂಡಿದ್ದಾರೆ. ಎಫ್‌ಪಿಐಗಳ ಈ ಖರೀದಿ ಪ್ರವೃತ್ತಿಯು ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹಣಕಾಸು ವಿಶ್ಲೇಷಕರು ಹೇಳಿದ್ದು, ಇದರಿಂದ ನಿಫ್ಟಿ 50 ಹೊಸ ದಾಖಲೆಯ ಎತ್ತರವನ್ನು ಮುಟ್ಟಲು ಸಹಕಾರಿಯಾಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಎನ್‌ಎಸ್‌ಡಿಎಲ್ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಭಾರತೀಯ ಷೇರುಗಳಲ್ಲಿನ ಎಫ್‌ಪಿಐಗಳ ಒಳಹರಿವು ₹43,838 ಕೋಟಿ ಆಗಿದೆ. ಇದು 2023 ರ ಅತ್ಯಧಿಕ ಮಾಸಿಕ ಖರೀದಿ ಮಾತ್ರವಲ್ಲ, ಕಳೆದ ವರ್ಷ ನವೆಂಬರ್ ನಂತರ ಬಂದ ಅತ್ಯಧಿಕ ಎಫ್ಪಿಐ ಹೂಡಿಕೆಯಾಗಿದೆ. "ಎಫ್‌ಪಿಐಗಳು ಮೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಸಕ್ರಿಯ ಖರೀದಿದಾರರಾಗಿದ್ದು, ಷೇರು ಮಾರುಕಟ್ಟೆ ಮತ್ತು ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಒಟ್ಟಾರೆ ₹ 43,838 ಕೋಟಿ ಹೂಡಿಕೆ ಮಾಡಿದ್ದಾರೆ (ಮೂಲ: NSDL). ಭಾರತವು ಈಗ ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ಮಾರುಕಟ್ಟೆಯಾಗಿದೆ ಎಂದು ವಿದೇಶಿ ಬಂಡವಾಳ ಹೂಡಿಕೆದಾರರ ಕುರಿತಾದ ಸಮೀಕ್ಷೆ ಹೇಳಿದೆ. ಮೇ ತಿಂಗಳಲ್ಲಿ, ಭಾರತವು ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಅತ್ಯಧಿಕ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು ಇದೇ ಸಮಯದಲ್ಲಿ ಎಫ್‌ಪಿಐಗಳು ಚೀನಾದಲ್ಲಿ ತಮ್ಮ ಹೂಡಿಕೆಯನ್ನು ಹಿಂತೆಗೆಯುತ್ತಿದ್ದಾರೆ" ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ ಕೆ ವಿಜಯಕುಮಾರ್ ಹೇಳಿದರು.