ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕರೆನ್ಸಿ ನಿರ್ವಹಣೆಯ ಭಾಗವಾಗಿ ಚಲಾವಣೆಯಲ್ಲಿರುವ 2000 ರೂಪಾಯಿಗಳ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ್ದರೂ, ಈ ಕ್ರಮವು ವಿವಿಧ ಸ್ಥೂಲ ಆರ್ಥಿಕ ನಿಯತಾಂಕಗಳನ್ನು (macroeconomic parameters) ಹೆಚ್ಚಿಸುವ ಸಾಧ್ಯತೆಯಿದೆ. ಮೇ 19, 2023 ರಂದು ಆರ್‌ಬಿಐ ರೂ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿತು. ಆದರೆ ಈ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಅದು ಹೇಳಿದೆ. ಅಲ್ಲದೇ ತಕ್ಷಣವೇ ಜಾರಿಗೆ ಬರುವಂತೆ ಇಂಥ ನೋಟುಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.
2000 ರೂ ಮುಖಬೆಲೆಯ ನೋಟುಗಳನ್ನು ನವೆಂಬರ್ 2016 ರಲ್ಲಿ RBI ಕಾಯಿದೆ, 1934 ರ ಸೆಕ್ಷನ್ 24 (1) ಅಡಿ ಪರಿಚಯಿಸಲಾಯಿತು. ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ ರೂ 500 ಮತ್ತು ರೂ 1000 ನೋಟುಗಳನ್ನು ಹಿಂಪಡೆದ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಲು 2000 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು.
ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ನಂತರ ರೂ 2000 ನೋಟುಗಳನ್ನು ಪರಿಚಯಿಸುವ ಉದ್ದೇಶವನ್ನು ಪೂರೈಸಲಾಯಿತು. ಆದ್ದರಿಂದ 2018-19ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. 2000 ರೂಪಾಯಿ ನೋಟುಗಳ ಹಿಂಪಡೆಯುವಿಕೆಯಿಂದ ಬ್ಯಾಂಕ್ ಠೇವಣಿ, ಸಾಲಗಳ ಮರುಪಾವತಿ, ಬಳಕೆ, ಆರ್‌ಬಿಐನ ಚಿಲ್ಲರೆ ಡಿಜಿಟಲ್ ಕರೆನ್ಸಿ ಬಳಕೆ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂಬ ಬಗ್ಗೆ ಎಸ್‌ಬಿಐ ರಿಸರ್ಚ್ ವರದಿಯಲ್ಲಿ ವಿಶ್ಲೇಷಿಸಿದೆ.
ಮೇ 19 ರ ಘೋಷಣೆಯ ನಂತರ ಹಿಂಪಡೆಯಬೇಕಾದ 2,000 ರೂ ನೋಟುಗಳಲ್ಲಿ ಶೇಕಡಾ 50 ರಷ್ಟು ನೋಟುಗಳು ಈಗಾಗಲೇ ಚಲಾವಣೆಗೆ ಮರಳಿದೆ ಮತ್ತು ಅದರಲ್ಲಿ ಶೇಕಡಾ 85 ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳ ಮೂಲಕ ಮರಳಿವೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. "ಒಟ್ಟಾರೆಯಾಗಿ ಇಲ್ಲಿಯವರೆಗೆ ಸುಮಾರು 1,80,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ.