ನವದೆಹಲಿ:ಹಿಂಪಡೆಯಲಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ, ಠೇವಣಿ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇನ್ನಷ್ಟು ಕಾಲ ವಿಸ್ತರಿಸಿದೆ. ಇಂದೇ (ಸೆ.30)ಕೊನೆಯಾಗಿದ್ದ ಗಡುವನ್ನು ಅಕ್ಟೋಬರ್ 7ರ ವರೆಗೆ ಕಾಲಾವಕಾಶ ನೀಡುವ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ಬ್ಯಾಂಕ್ ರಜೆಗಳಿಂದಾಗ ಅಡ್ಡಿ ಮತ್ತು ಜನರ ಅನುಕೂಲಕ್ಕಾಗಿ ಎರಡು ಸಾವಿರದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಇನ್ನೂ 7 ದಿನಗಳ ಕಾಲಾವಕಾಶ ನೀಡಲಾಗಿದೆ. ಗ್ರಾಹಕರು ಬ್ಯಾಂಕ್‌ಗಳಿಗೆ ತೆರಳಿ ಅಥವಾ ನೋಟನ್ನು ಯಾವುದೇ ರೀತಿಯಲ್ಲಾದರೂ ವಿನಿಯೋಗಿಸಿ ಬದಲಿಸಿಕೊಳ್ಳಲು ಸೂಚಿಸಿದೆ. ಕಾಲಾವಧಿ ಮುಗಿದ ನಂತರ ಅದು ಮೌಲ್ಯ ಕಳೆದುಕೊಳ್ಳಲಿದೆ ಎಂದೂ ಹೇಳಿದೆ.
ಇನ್ನೂ ಯಾರ ಬಳಿಯಾದರೂ 2000 ರೂಪಾಯಿ ನೋಟುಗಳಿದ್ದರೆ, ಅಂಥವರು ಸಾಧ್ಯವಾದಷ್ಟು ಬೇಗ ಅವುಗಳನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕು ಅಥವಾ ಬದಲಾಯಿಸಬೇಕು. ಅಕ್ಟೋಬರ್ 8 ರ ನಂತರ ಈ ನೋಟುಗಳು ಅಮಾನ್ಯವಾಗಲಿವೆ. ಗಡುವು ತೀರಿದ ಬಳಿಕ ಬ್ಯಾಂಕ್ಗಳು ಎರಡು ಸಾವಿರದ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲು ಅಥವಾ ಬದಲಾಯಿಸಿಕೊಳ್ಳಲು ಅವಕಾಶ ನೀಡುವುದಿಲ್ಲ.
ಗರಿಷ್ಠ 20 ಸಾವಿರ ವಿನಿಮಯ:ಜನರು ಆರ್‌ಬಿಐ ಸೂಚಿಸಿದ ಬ್ಯಾಂಕ್ ಶಾಖೆಗಳು ಮತ್ತು ಆರ್‌ಬಿಐನ ಪ್ರಾದೇಶಿಕ ಶಾಖೆಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಭಾರತೀಯ ಅಂಚೆ ಮೂಲಕವೂ ನೋಟುಗಳನ್ನು ಆಯಾ ಆರ್‌ಬಿಐ ಕಚೇರಿಗಳಿಗೆ ಕಳುಹಿಸಬಹುದು. ಒಂದು ಬಾರಿಗೆ ಗರಿಷ್ಠ 20,000 ರೂ.ವರೆಗೆ ಮೊತ್ತವನ್ನು ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದಾಗಿದೆ.