ಬೆಂಗಳೂರು: ಬಾಡಿಗೆ ಅಥವಾ ಲೀಸ್ಗೆ ನೀಡಿದ ಕಚೇರಿ ಅಥವಾ ಅಂಗಡಿಯಂಥ ವಾಣಿಜ್ಯ ಆಸ್ತಿ ಕಟ್ಟಡಗಳಿಗೆ ಮಾತ್ರ ಈ ಮುಂಚೆ ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಂಡ ಬಾಡಿಗೆದಾರನು ಕೂಡ ಶೇ 18ರಷ್ಟು ಜಿಎಸ್‌ಟಿ ಪಾವತಿಸಬೇಕಾಗಿದೆ. ಈ ನಿಯಮ ಜುಲೈ 18 ರಿಂದಲೇ ಜಾರಿಯಾಗಿದೆ. ಆದರೆ ಈ ನಿಯಮ ಎಲ್ಲರಿಗೂ ಅನ್ವಯಿಸುವುದಿಲ್ಲ. ಹಾಗಾದರೆ ಯಾರಿಗೆಲ್ಲ ನಿಯಮ ಅನ್ವಯಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
ಬಾಡಿಗೆದಾರನೊಬ್ಬ ಜಿಎಸ್‌ಟಿ ನೋಂದಾಯಿತನಾಗಿದ್ದು, ಅಂದರೆ ಜಿಎಸ್‌ಟಿ ನೋಂದಾಯಿಸಿ ಅದರಡಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ, ಆಗ ತಾನು ಪಾವತಿಸುವ ಬಾಡಿಗೆಯ ಮೇಲೆ ಶೇ 18 ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಈ ಮುಂಚೆ ಬಾಡಿಗೆ ಅಥವಾ ಲೀಸ್ಗೆ ಪಡೆದ ವಾಣಿಜ್ಯ ಮಾತ್ರ ಕಟ್ಟಡಗಳಿಗೆ ಜಿಎಸ್‌ಟಿ ಪಾವತಿಸಬೇಕಿತ್ತು. ಆದರೆ ಗೃಹಬಳಕೆ ಕಟ್ಟಡಗಳನ್ನು ಬಾಡಿಗೆ ಅಥವಾ ಲೀಸ್ ಪಡೆಯುವ ಕಂಪನಿ ಅಥವಾ ವ್ಯಕ್ತಿಗಳು ಜಿಎಸ್‌ಟಿ ಪಾವತಿಸಬೇಕಿರಲಿಲ್ಲ.
ಆದರೆ ಬದಲಾದ ನಿಯಮಗಳ ಪ್ರಕಾರ ಜಿಎಸ್‌ಟಿ ನೋಂದಾಯಿತ ಬಾಡಿಗೆದಾರನೊಬ್ಬ ಜಿಎಸ್‌ಟಿ ಪಾವತಿಸಬೇಕಿದೆ. ರಿವರ್ಸ್ ಚಾರ್ಜ್ ಮೆಕ್ಯಾನಿಸಂ (reverse charge mechanism -RCM) ಪ್ರಕಾರ ಹೊಸ ನಿಯಮ ರೂಪಿಸಲಾಗಿದೆ. ಬಾಡಿಗೆದಾರನು ತಾನು ಪಾವತಿಸಿದ ಜಿಎಸ್‌ಟಿ ಮೊತ್ತವನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿಯಲ್ಲಿ ಡಿಡಕ್ಷನ್ ಆಗಿ ಕ್ಲೇಮ್ ಮಾಡಬಹುದು.