ನವದೆಹಲಿ : ಅಮೆಜಾನ್ನಲ್ಲಿ ಉದ್ಯೋಗ ಕಡಿತದ ಪರ್ವ ಈಗಲೇ ನಿಲ್ಲುವಂತೆ ಕಾಣುತ್ತಿಲ್ಲ. ಕಂಪನಿಯ ಪ್ರೈಮ್ ಗೇಮಿಂಗ್, ಗೇಮ್ ಗ್ರೋತ್ ಮತ್ತು ಅಮೆಜಾನ್ ಗೇಮ್ ವಿಭಾಗಗಳಲ್ಲಿನ 100 ಉದ್ಯೋಗಿಗಳನ್ನು ಪ್ರಸ್ತುತ ವಜಾಗೊಳಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುವ ಕಂಪನಿಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿಗೆ ಕಳುಹಿಸಲಾದ ಆಂತರಿಕ ಪತ್ರದಲ್ಲಿ, ಈ ಉದ್ಯೋಗ ಕಡಿತವು ಕಂಪನಿಯ ಪುನಾರಚನೆ ಮತ್ತು ಅದರ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ ಎಂದು ಅಮೆಜಾನ್ ಗೇಮ್ಸ್ ವೈಸ್ ಪ್ರೆಸಿಡೆಂಟ್ ಕ್ರಿಸ್ಟೋಫ್ ಹಾರ್ಟ್‌ಮನ್ ಬಹಿರಂಗಪಡಿಸಿದ್ದಾರೆ.
ಸಿಬ್ಬಂದಿಗೆ ಹಾರ್ಟ್‌ಮನ್ ಅವರು ಬರೆದ ಮೆಮೊವನ್ನು ಉಲ್ಲೇಖಿಸಿದ ಅಂತಾರಾಷ್ಟ್ರೀಯ ಮಾಧ್ಯಮಗಳು, ವಜಾಗೊಳ್ಳಲಿರುವ ಉದ್ಯೋಗಿಗಳಿಗೆ ಈ ಬಗ್ಗೆ ತಿಳಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಹ್ಯೂಮನ್ ರಿಸೋರ್ಸ್ ವಿಭಾಗದೊಂದಿಗೆ ಲೈವ್ ಮೀಟಿಂಗ್ ನಡೆಸಿ ಉದ್ಯೋಗಿಗಳಿಗೆ ಈ ಮಾಹಿತಿ ನೀಡಲಾಗಿದೆ. ಇದಲ್ಲದೇ, ಅಮೆಜಾನ್ ಉದ್ಯೋಗಿಗಳಿಗೆ ಪರಿಹಾರ ವೇತನ, ಆರೋಗ್ಯ ವಿಮೆ ಪ್ರಯೋಜನಗಳು, ಔಟ್‌ಪ್ಲೇಸ್‌ಮೆಂಟ್ ಸೇವೆಗಳು ಮತ್ತು ಅವರು ಬೇರೊಂದು ಉದ್ಯೋಗಕ್ಕೆ ಹುಡುಕಾಟ ನಡೆಸಲು ಸಂಬಳ ಪಾವತಿಸುವ ಮೂಲಕ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡಿದೆ.
ಸದ್ಯ ನಮ್ಮ ಯೋಜನೆಗಳು ಹಾಗೂ ದೀರ್ಘಕಾಲೀನ ಗುರಿಗಳನ್ನು ಮೌಲ್ಯಮಾಪನ ಮಾಡಿದ ನಂತರ, ಪ್ರೈಮ್ ಗೇಮಿಂಗ್, ಗೇಮ್ ಗ್ರೋಥ್ ಮತ್ತು ನಮ್ಮ ಸ್ಯಾನ್ ಡಿಯೆಗೊ ಸ್ಟುಡಿಯೊಗಳಲ್ಲಿನ ಕೇವಲ 100 ಉದ್ಯೋಗಿಗಳನ್ನು ಕಡಿತಗೊಳಿಸುವ ಕ್ಲಿಷ್ಟಕರ ನಿರ್ಧಾರವನ್ನು ನಮ್ಮ ಗೇಮಿಂಗ್ ವಿಭಾಗದ ಮುಖ್ಯಸ್ಥರು ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲ ಉದ್ಯೋಗಿಗಳನ್ನು ಅವರ ಕೌಶಲ್ಯಕ್ಕೆ ಸೂಕ್ತವಾದ ಬೇರೊಂದು ಪ್ರೊಜೆಕ್ಟ್ಗಳಿಗೆ ನೇಮಕ ಮಾಡಲಾಗುತ್ತಿದೆ ಎಂದು ಹಾರ್ಟ್‌ಮನ್ ತಿಳಿಸಿದ್ದಾರೆ. ಅಮೆಜಾನ್ ಈಗಾಗಲೇ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಲ್ಲಧೆ ತನ್ನ ಕಾರ್ಪೊರೇಟ್ ವಿಭಾಗದಲ್ಲಿ ಸದ್ಯಕ್ಕೆ ಎಲ್ಲ ನೇಮಕಾತಿಗಳನ್ನು ಕಂಪನಿ ಸ್ಥಗಿತಗೊಳಿಸಿದೆ. ಜೊತೆಗೆ ಕೆಲ ಪ್ರಯೋಗಾತ್ಮಕ ಯೋಜನೆಗಳಾದ ಟೆಲಿಹೆಲ್ಥ್ ಸರ್ವಿಸ್ ಮತ್ತು ಸೈಡ್ವಾಕ್ ಡೆಲಿವರಿ ರೋಬೋಟ್ ಯೋಜನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ.