ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್ಓ) 2022-23ರಲ್ಲಿ ಸುಮಾರು 1.39 ಕೋಟಿ ನಿವ್ವಳ ಸಂಖ್ಯೆಯ ಸದಸ್ಯರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 13.22 ರಷ್ಟು ಹೆಚ್ಚಳವಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 1.22 ಕೋಟಿ ನಿವ್ವಳ ಸದಸ್ಯರು ಸೇರ್ಪಡೆಯಾಗಿದ್ದರು. 2022-23 ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ನಲ್ಲಿ ಇಪಿಎಫ್ಓಗೆ 13.40 ಲಕ್ಷ ಸದಸ್ಯರು ಸೇರಿಕೊಂಡಿದ್ದಾರೆ.
ಈ ಸದಸ್ಯರಲ್ಲಿ ಸುಮಾರು 7.58 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್ಓ ವ್ಯಾಪ್ತಿಗೆ ಬಂದಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ 2.35 ಲಕ್ಷ ಸದಸ್ಯರು 18 ರಿಂದ 21 ವರ್ಷ ವಯಸ್ಸಿನವರಾಗಿದ್ದಾರೆ. ಇವರ ನಂತರ 22 ರಿಂದ 25 ವರ್ಷ ವಯಸ್ಸಿನವರು 1.94 ಲಕ್ಷ ಜನ ಸದಸ್ಯರಾಗಿದ್ದಾರೆ. 18 ರಿಂದ 25 ವರ್ಷದ ವಯೋಮಾನದವರು ತಿಂಗಳಿನಲ್ಲಿ ಸೇರ್ಪಡೆಯಾದ ಒಟ್ಟು ಹೊಸ ಸದಸ್ಯರಲ್ಲಿ ಶೇಕಡಾ 56.60 ರಷ್ಟಿದ್ದಾರೆ.
ಈ ವೇತನದಾರರ ದತ್ತಾಂಶದ ವಯಸ್ಸಿನ ವಾರು ಹೋಲಿಕೆಯು ದೇಶದ ಸಂಘಟಿತ ವಲಯದ ಉದ್ಯೋಗಿಗಳಿಗೆ ಸೇರುವ ಬಹುಪಾಲು ಸದಸ್ಯರು ಮೊದಲ ಬಾರಿಗೆ ಉದ್ಯೋಗ ಹುಡುಕುವವರು ಎಂಬುದನ್ನು ಸೂಚಿಸುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿದೆ. ಸರಿಸುಮಾರು 10.09 ಲಕ್ಷ ಸದಸ್ಯರು ಇಪಿಎಫ್‌ಒ ಸದಸ್ಯತ್ವಕ್ಕೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಡೇಟಾ ಎತ್ತಿ ತೋರಿಸಿದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದ್ದಾರೆ ಮತ್ತು ಇಪಿಎಫ್ಓ ಅಡಿಯಲ್ಲಿ ಒಳಗೊಳ್ಳುವ ಸಂಸ್ಥೆಗಳಿಗೆ ಮರು ಸೇರ್ಪಡೆಗೊಂಡಿದ್ದಾರೆ ಮತ್ತು ಅಂತಿಮ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಬದಲು ತಮ್ಮ ಸಂಚಯಗಳನ್ನು ವರ್ಗಾಯಿಸಲು ಬಯಸಿದ್ದಾರೆ.