ಕರ್ನಾಟಕ

karnataka

ETV Bharat / business

2 ತಿಂಗಳಲ್ಲಿ 417 ಟೆಕ್​ ಕಂಪನಿಗಳ 1.2 ಲಕ್ಷ ಉದ್ಯೋಗಿಗಳು ವಜಾ! - ಟೆಕ್ ಕಂಪನಿಗಳು ಉದ್ಯೋಗಿಗಳ ಕಡಿತ

ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಹಾಗೂ ಇನ್ನೂ ಹಲವಾರು ಕಾರಣಗಳಿಂದ ಜಗತ್ತಿನ ಹಲವಾರು ಟೆಕ್ ಕಂಪನಿಗಳು ಉದ್ಯೋಗಿಗಳ ಕಡಿತ ಕ್ರಮವನ್ನು ಮುಂದುವರೆಸಿವೆ. ಎರಡು ತಿಂಗಳಲ್ಲಿ 417 ಟೆಕ್​ ಕಂಪನಿಗಳು 1.2 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ವರದಿ ಹೇಳಿದೆ.

417 tech firms lay off over 1.2 lakh employees in Jan-Feb alone
417 tech firms lay off over 1.2 lakh employees in Jan-Feb alone

By

Published : Feb 27, 2023, 7:24 PM IST

ನವದೆಹಲಿ : 2023ನೇ ವರ್ಷವು ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅತ್ಯಂತ ಕೆಟ್ಟ ವರ್ಷ ಎಂದು ಈಗ ಹೇಳಲಾಗುತ್ತಿದೆ. ವರ್ಷದ ಮೊದಲ ಎರಡು ತಿಂಗಳಲ್ಲಿಯೇ 417 ಮುಂಚೂಣಿಯ ತಂತ್ರಜ್ಞಾನ ಕಂಪನಿಗಳು ಜಾಗತಿಕವಾಗಿ 1.2 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ. ಹೋಲಿಕೆ ಮಾಡಿ ನೋಡುವುದಾದರೆ, ಬಿಗ್ ಟೆಕ್‌ನಿಂದ ಸ್ಟಾರ್ಟ್‌ಅಪ್‌ಗಳವರೆಗಿನ 1,046 ಟೆಕ್ ಕಂಪನಿಗಳು 2022 ರಲ್ಲಿ 1,61 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ಲೇಆಫ್‌ಗಳ ಟ್ರ್ಯಾಕಿಂಗ್ ಸೈಟ್ ಡೇಟಾ ತಿಳಿಸಿದೆ.

ಜನವರಿಯೊಂದರಲ್ಲೇ ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್, ಸೇಲ್ಸ್‌ಫೋರ್ಸ್ ಮತ್ತು ಇತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1 ಲಕ್ಷ ಟೆಕ್ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸುಮಾರು 3 ಲಕ್ಷ ಟೆಕ್ ಉದ್ಯೋಗಿಗಳು ಈಗ 2022 ರಲ್ಲಿ ಮತ್ತು ಈ ವರ್ಷದ ಫೆಬ್ರವರಿವರೆಗೆ ಕೆಲಸ ಕಳೆದುಕೊಂಡಿದ್ದಾರೆ. ಹೆಚ್ಚು ಹೆಚ್ಚು ಬಿಗ್ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ಮುಂದುವರೆಸುತ್ತಿದ್ದು, ಇದಕ್ಕೆ ಹಲವಾರು ಕಾರಣಗಳನ್ನು ಕಂಪನಿಗಳು ನೀಡಿವೆ. ಅಗತ್ಯಕ್ಕಿಂತ ಹೆಚ್ಚು ನೇಮಕಾತಿ, ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಪರಿಸ್ಥಿತಿಗಳು ಹೀಗೆ ಹಲವಾರು ಕಾರಣಗಳನ್ನು ನೀಡಲಾಗಿದೆ.

ವರದಿಗಳ ಪ್ರಕಾರ ಮೆಟಾ (ಹಿಂದೆ ಫೇಸ್‌ಬುಕ್) ಮತ್ತೊಂದು ದೊಡ್ಡ ಸುತ್ತಿನ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೂಡ ಮೆಟಾ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈಗ ಕಾರ್ಯಕ್ಷಮತೆಯ ಬೋನಸ್‌ಗಳನ್ನು ಪಾವತಿಸಿದ ನಂತರ ಮುಂದಿನ ತಿಂಗಳ ಆರಂಭದಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವಾಗಬಹುದು ಎನ್ನಲಾಗಿದೆ. ಮೆಟಾ ಇತ್ತೀಚಿನ ಸುತ್ತಿನ ಕಾರ್ಯಕ್ಷಮತೆಯ ವಿಮರ್ಶೆಗಳಲ್ಲಿ ಸಾವಿರಾರು ಉದ್ಯೋಗಿಗಳಿಗೆ ಅತಿ ಕಳಪೆ ರೇಟಿಂಗ್‌ಗಳನ್ನು ನೀಡಿದೆ ಎಂದು ವರದಿಯಾಗಿದೆ. ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಈ ಮೂಲಕ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಇದನ್ನು ಅರ್ಥೈಸಲಾಗಿದೆ.

ಸ್ವೀಡಿಷ್ ಟೆಲಿಕಾಂ ಸಾಧನಗಳ ತಯಾರಕ ಕಂಪನಿ ಎರಿಕ್ಸನ್, ಸದ್ಯದ ಜಾಗತಿಕ ಆರ್ಥಿಕ ಹಿಂಜರಿತದ ಪರಿಸ್ಥಿತಿಗಳಲ್ಲಿ ವೆಚ್ಚ ಕಡಿತಗೊಳಿಸಲು ತನ್ನ ಉದ್ಯೋಗಿಗಳ ಪೈಕಿ ಸುಮಾರು 8,500 ಜನರನ್ನು ವಜಾಗೊಳಿಸಲು ಮುಂದಾಗಿದೆ. ಇನ್ನು ಜಾಗತಿಕ ಸಲಹಾ ಸಂಸ್ಥೆಯಾದ McKinsey & Co ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಮತ್ತೊಂದು ಪ್ರಮುಖ ಸಲಹಾ ಸಂಸ್ಥೆ KPMG ತನ್ನ ಶೇಕಡಾ 2 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.

ಸಾಮಾಜಿಕ ಜಾಲತಾಣ ಕಂಪನಿ ಟ್ವಿಟರ್ ಇಂಕ್ ಮತ್ತೆ ಕನಿಷ್ಠ 200 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಮಸ್ಕ್ ಪ್ರಕಾರ ಕಂಪನಿಯು ಕಳೆದ ತಿಂಗಳು ಸುಮಾರು 2,300 ಸಕ್ರಿಯ ಉದ್ಯೋಗಿಗಳನ್ನು ಹೊಂದಿದೆ. ಟ್ವಿಟರ್ ಈವರೆಗೆ ಸುಮಾರು 3,700 ಉದ್ಯೋಗಿಗಳನ್ನು ವೆಚ್ಚ ಕಡಿತದ ಭಾಗವಾಗಿ ವಜಾಗೊಳಿಸಿದೆ. ಕೆಲಸದಿಂದ ವಜಾಗೊಳಿಸಲ್ಪಟ್ಟ ಗೂಗಲ್ ಇಂಡಿಯಾ ಉದ್ಯೋಗಿಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಗೂಗಲ್ ಕಂಪನಿಯ ವಜಾ ಕ್ರಮಗಳು ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಆಧರಿಸಿಲ್ಲ ಎಂದು ಬರೆದಿದ್ದಾರೆ. ಕಂಪನಿಯಲ್ಲಿ ಉತ್ತಮ ಕಾರ್ಯಕ್ಷಮತೆ ಹಾಗೂ ಹೆಚ್ಚಿನ ರೇಟಿಂಗ್‌ ಹೊಂದಿದವರನ್ನು ಸಹ ವಜಾಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಕ್ರೋಮ್​ನಲ್ಲಿ ಶೇ 300ರಷ್ಟು ಜೂಮಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್

ABOUT THE AUTHOR

...view details