ನವದೆಹಲಿ:ನಿಧಾನಗತಿಯ ಬೇಡಿಕೆಯ ಹೊರತಾಗಿಯೂ ಡೀಸೆಲ್ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಆಗುತ್ತಿರುವುದು ಸಾರಿಗೆ ಕ್ಷೇತ್ರವನ್ನು ಒಂದು ದೊಡ್ಡ ಪ್ರಪಾತಕ್ಕೆ ತಳ್ಳಿದಂತಿದೆ. ಹೆಚ್ಚುತ್ತಿರುವ ಇಂಧನ ವೆಚ್ಚವು ಅದರ ಬೆಳವಣಿಗೆಯನ್ನು ಮತ್ತಷ್ಟು ಕುಗ್ಗಿಸಿದೆ.
ದೆಹಲಿಯಲ್ಲಿ ಸೋಮವಾರ ಡೀಸೆಲ್ ಬೆಲೆಯಲ್ಲಿ 11 ಪೈಸೆ ಹೆಚ್ಚಳವಾಗಿದ್ದು, ಪೆಟ್ರೋಲ್ ದರ ಸ್ಥಿರವಾಗಿ ಉಳಿದಿದೆ. ಈ ಎರಡೂ ಇಂಧನಗಳ ನಡುವಿನ ಬೆಲೆಯ ಅಂತರವು ರಾಷ್ಟ್ರ ರಾಜಧಾನಿಯಲ್ಲಿ ಮತ್ತಷ್ಟು ವಿಸ್ತರಿಸಿದೆ. ಕಳೆದ ತಿಂಗಳು ಡೀಸೆಲ್ ಬೆಲೆಯು ಪೆಟ್ರೋಲ್ಗಿಂತ ಮೇಲ್ಮುಖವಾಗಿತ್ತು.
ದೆಹಲಿಯಲ್ಲಿ ಸೋಮವಾರ ಡೀಸೆಲ್ ಬೆಲೆ ಲೀಟರ್‌ಗೆ 81.05 ರೂ.ಗಳಾಗಿದ್ದು, ಈ ಹಿಂದಿನ ಮಟ್ಟದಲ್ಲಿ 80.94 ರೂ.ಯಷ್ಟಿತ್ತು. ಪೆಟ್ರೋಲ್ ಬೆಲೆ ಲೀಟರ್‌ಗೆ 80.43 ರೂ. ಯಥಾವತ್ತಾಗಿ ಉಳಿದಿದೆ. ಇದು ಜೂನ್ 29ರ ಮಟ್ಟದಲ್ಲಿದೆ.
ರಾಜಧಾನಿ ಜೊತೆಗೆ ಇತರ ಮೆಟ್ರೊ ನಗರಗಳಲ್ಲೂ ಡೀಸೆಲ್ ಬೆಲೆ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಕೋವಿಡ್ -19 ಸಂಬಂಧಿತ ಲಾಕ್‌ಡೌನ್ ವೇಳೆ ಕಳೆದ 82 ದಿನಗಳಿಂದ ಬೆಲೆಯನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದ ತೈಲ ವಿತರಣಾ ಕಂಪನಿಗಳು ಜೂನ್ 7ರಿಂದ ಎರಡು ಇಂಧನಗಳ ಬೆಲೆ ಪರಿಷ್ಕರಣೆ ಪ್ರಾರಂಭಿಸಿದವು. ಅಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಪ್ರತಿ ಲೀಟರ್‌ಗೆ 9.5 ರೂ - 11.5 ರೂ. ಏರಿಕೆಯಾಗಿದೆ. ಕಳೆದ ವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಾಲ್ಕು ದಿನಗಳವರೆಗೆ ಬದಲಾಗದೇ ಉಳಿದಿದ್ದು, ಡೀಸೆಲ್ ಬೆಲೆ ಭಾನುವಾರ ಮತ್ತು ಸೋಮವಾರ ಹೆಚ್ಚಾಗಿದೆ.