ಹೈದರಾಬಾದ್:ಬೆಳ್ಳಿಯನ್ನು ಚಿನ್ನದ ಸೋದರ ಸಂಬಂಧಿ, ಬಡವರ ಚಿನ್ನ ಎಂದೂ ಕರೆಯಲಾಗುತ್ತದೆ. ಆದರೆ, ಕಳೆದ ಕೆಲವು ವಾರಗಳಿಂದ ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ಬೆಲೆಯು ಬಂಗಾರಕ್ಕಿಂತ ವ್ಯಾಪಕ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.
ಭಾರತದಲ್ಲಿ ಕಳೆದ ವಾರದೊಳಗೆ ಬೆಳ್ಳಿ ಪ್ರತಿ ಕೆ.ಜಿ. ಮೇಲೆ 9,000 ರೂ. ಅಥವಾ ಶೇ 17.5ರಷ್ಟು ಏರಿಕೆಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿನ ಮಟ್ಟಕ್ಕಿಂತ ಸುಮಾರು ಶೇ 70ರಷ್ಟು ಗಗನಕ್ಕೇರಿದೆ. ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಂದು ಪ್ರತಿ ಕೆ.ಜಿ. 62,400 ರೂ.ಗೆ ತಲುಪಿದೆ. ಇದು ಒಂಭತ್ತು ವರ್ಷಗಳಲ್ಲಿ ಗರಿಷ್ಠ ಮಟ್ಟದ ದರವಾಗಿದೆ.
ಅಮೂಲ್ಯ ಲೋಹ ಮತ್ತು ಕೈಗಾರಿಕಾ ಲೋಹವಾದ ಬೆಳ್ಳಿ, ಎರಡೂ ರಂಗಗಳಲ್ಲಿ ಲಾಭ ಗಳಿಸಿರುವುದರಿಂದ ಇತ್ತೀಚಿನ ಬೆಲೆಗಳಲ್ಲಿ ನಾಟಕೀಯ ಏರಿಕೆ ದಾಖಲಿಸಿದೆ. ಜಾಗತಿಕ ಕೊರೊನಾ ಸಾಂಕ್ರಾಮಿಕ, ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತು ಅನಿಶ್ಚಿತತೆಯ ನಡುವೆ ಬೆಳ್ಳಿಯ ಮೇಲಿನ ಹೂಡಿಕೆ ಹೆಚ್ಚಾಗಿದೆ. ಆರಂಭದಲ್ಲಿ ಚಿನ್ನದ ಟ್ರ್ಯಾಕಿಂಗ್ನಿಂದಾಗಿ ಬೆಳ್ಳಿ ಕೂಡ ಲಾಭ ಮಾಡಿಕೊಂಡಿದೆ. ಭಾರತದ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ 10 ಗ್ರಾಂ. ಚಿನ್ನ ಇತ್ತೀಚೆಗೆ 50,700 ರೂ. ದಾಟಿದೆ.
ಸೌರ ಫಲಕಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಬಳಸಲಾಗುವ ಬೆಳ್ಳಿ, ಕೈಗಾರಿಕಾ ಬೇಡಿಕೆಯಲ್ಲಿ ವೇಗ ಪಡೆದಿದೆ. ಮಂಗಳವಾರದಂದು 27 ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ನಾಯಕರು ವಿಶ್ವದ ಅತಿದೊಡ್ಡ ಗ್ರೀನ್ ಉತ್ತೇಜಕ ಪ್ಯಾಕೇಜ್ ಒಂದನ್ನು ಘೋಷಿಸಿದರು.
ಇಯು ಸದಸ್ಯರು ಈ ಪ್ಯಾಕೇಜ್‌ನಲ್ಲಿ ಹವಾಮಾನ ಬದಲಾವಣೆಯ ವಿರುದ್ಧ 630 ಬಿಲಿಯನ್ ಡಾಲರ್ ಖರ್ಚು ಮಾಡಲು ಮೀಸಲಿಟ್ಟರು. ಇದರ ನಡುವೆ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ತನ್ನ 2 ಟ್ರಿಲಿಯನ್ ಡಾಲರ್ ಯೋಜನೆಯ ಕ್ಲೀನ್ ಎನರ್ಜಿಗಾಗಿ ಘೋಷಿಸಿದ್ದಾರೆ. ಇವೆಲ್ಲವೂ ಸೌರ ಫಲಕಗಳು ಕೇಂದ್ರಿತ ಯೋಜನೆಗಳಾಗಿವೆ.
ಬೆಳ್ಳಿ, ದ್ಯುತಿವಿದ್ಯುಜ್ಜನಕ ಕೋಶಗಳ ಉತ್ಪಾದನೆಯಲ್ಲಿ ಪ್ರಮುಖ ಅಂಶವಾಗಿದೆ. ಇದನ್ನು ಸೌರ ಫಲಕ ಅಥವಾ ವಾಹನ ಘಟಕಗಳಲ್ಲಿ ಬಳಸಲಾಗುತ್ತದೆ. ಹಸಿರು ಇಂಧನದ ತಂತ್ರಜ್ಞಾನ ವಿಕಸನ ಮತ್ತು ವಾಹನ ಉದ್ಯಮದಲ್ಲಿ ಹೆಚ್ಚುತ್ತಿರುವ ವಿದ್ಯುದೀಕರಣವು ಈ ಲೋಹಕ್ಕೆ ವ್ಯಾಪಕ ಬೇಡಿಕೆಯನ್ನು ತರುತ್ತಿದೆ ಎಂದು ವಿಶ್ವಾದ್ಯಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಬೆಲೆಯಲ್ಲಿನ ದೃಢತೆ, ಕೋವಿಡ್-19 ಲಸಿಕೆ ಮತ್ತು ಅಮೆರಿಕ ಡಾಲರ್ ದುರ್ಬಲತೆಯ ನಡುವೆ ವಿಶ್ವದಾದ್ಯಂತ ಕೈಗಾರಿಕಾ ಚಟುವಟಿಕೆಗಳ ಪುನರಾರಂಭದಲ್ಲಿ ಬೆಳ್ಳಿ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚಿನ ವಹಿವಾಟಿನ ಅವಧಿಗಳಲ್ಲಿ ಬೆಳ್ಳಿ ಬೆಲೆ ರೇಸಿನಲ್ಲಿದೆ ಎನ್ನುತ್ತಾರೆ ಏಂಜಲ್ ಬ್ರೋಕಿಂಗ್‌ನ ಸರಕು ಮತ್ತು ಕರೆನ್ಸಿಗಳ ಸಹಾಯಕ ಉಪಾಧ್ಯಕ್ಷ (ಸಂಶೋಧನೆ) ಪ್ರಥಮೇಶ್ ಮಲ್ಯ.