ಮುಂಬೈ: ಏಷ್ಯಾದ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್ಗಾಂವ್ನಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ರೂ.30ಗೆ ಇಳಿಕೆಯಾಗಿದೆ.
ಮಂಡಿಗಳಲ್ಲಿ ದಾಸ್ತಾನು ಅಭಾವವೆಂದು ರಫ್ತು ಮೇಲಿನ ನಿಷೇಧ ವಿಧಿಸಿದ್ದರಿಂದ ಈರುಳ್ಳಿಯ ಸಗಟು ಹಾಗೂ ಚಿಲ್ಲರೆ ಮಾರಾಟದಲ್ಲಿ ದಿಢೀರನೆ ಬೆಲೆ ಕುಸಿದಿದೆ. ಸೆಪ್ಟಂಬರ್ವರೆಗೂ ಪ್ರತಿ ಕೆ.ಜಿ. ಈರುಳ್ಳಿಯು ರೂ.51ಯಲ್ಲಿ ಮಾರಾಟ ಆಗುತ್ತಿತ್ತು. ಬೆಳೆಗಾರರಿಗೆ ಒಂದಿಷ್ಟು ಲಾಭಾಂಶ ಸಿಗುತ್ತಿತ್ತು.
ಕೇಂದ್ರ ಸರ್ಕಾರವು ಬೆಲೆ ಏರಿಕೆಯನ್ನು ನಿಯಂತ್ರಿಸಲು ರಫ್ತಿನ ಮೇಲೆ ನಿಷೇಧ ವಿಧಿಸಿದ್ದರಿಂದ ದೇಶಿ ಮಾರುಕಟ್ಟೆಯಲ್ಲಿ ಏಕಾಏಕಿ ದರ ಇಳಿಕೆ ಕಂಡಿದೆ. ಬೆಳೆಗಾರರ ಆದಾಯ ಇಳಿಕೆ ಆಗಿದೆ. ಕಳೆದ ತಿಂಗಳು ಕೆ.ಜಿ. ಉಳ್ಳಾಗಡ್ಡಿಯು ₹ 51- 61 ನಡುವೆ ಮಾರಾಟ ಆಗುತ್ತಿತ್ತು. ಅದು ಈಗ 30 ರೂ.ಗೆ ಬಂದು ತಲುಪಿದೆ.
ಸೆಪ್ಟಂಬರ್ ಮಧ್ಯಂತರ ಅವಧಿಯಲ್ಲಿ ನಾಸಿಕ್ನ ಲಸಲ್ಗಾಂವ್ ಮಾರುಕಟ್ಟೆಯಲ್ಲಿ ಸಗಟು ವಹಿವಾಟಿನ ಕೆ.ಜಿ. ಈರುಳ್ಳಿ ₹ 51ಯಿಂದ ₹ 26ಕ್ಕೆ ಇಳಿಕೆಯಾಗಿದೆ. ಗರಿಷ್ಠ ದರವು ₹ 30.20 ಹಾಗೂ ಕನಿಷ್ಠ ದರವು ₹ 15ಯಲ್ಲಿ ಮಾರಾಟ ಆಗುತ್ತಿದೆ.