ವಾಷಿಂಗ್ಟನ್: ಉಕ್ರೇನ್ ಮೇಲೆ ಕಳೆದ 13 ದಿನಗಳಿಂದ ಯುದ್ಧ ಮಾಡುತ್ತಿರುವ ರಷ್ಯಾಗೆ ಆರ್ಥಿಕ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಪುಟಿನ್ ಸರ್ಕಾರದಿಂದ ತೈಲ, ಅನಿಲ ಖರೀದಿ ನಿಷೇಧಿಸಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ನಾವು ರಷ್ಯಾದ ತೈಲ ಮತ್ತು ಅನಿಲದ ಎಲ್ಲಾ ಆಮದುಗಳನ್ನು ನಿಷೇಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಯುದ್ಧದಿಂದ ಹಾನಿಗೊಳಗಾದ ಉಕ್ರೇನ್‌ಗೆ ಬೆಂಬಲವಾಗಿ ಯುಎಸ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಮತ್ತೊಂದು ಟ್ವೀಟ್‌ನಲ್ಲಿ ಬೈಡನ್, ಉಕ್ರೇನ್ ಜನರನ್ನು ಬೆಂಬಲಿಸಲು ಅಮೆರಿಕನ್ನರು ಒಟ್ಟುಗೂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧಕ್ಕೆ ಸಬ್ಸಿಡಿ ನೀಡುವ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪುಟಿನ್ ನಡೆಸುತ್ತಿರುವ ಯುದ್ಧವು ಈಗಾಗಲೇ ಅಮೆರಿಕನ್ ಕುಟುಂಬಗಳನ್ನು ನೋಯಿಸುತ್ತಿದೆ. ನಮ್ಮ ನಿರ್ಧಾರವು ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ, ಬೆಲೆ ಏರಿಕೆಯನ್ನು ಕಡಿಮೆ ಮಾಡಲು ನಾನು ಪ್ರತಿ ಹೆಜ್ಜೆಯನ್ನು ಮನೆಯಲ್ಲಿಯೇ ತೆಗೆದುಕೊಳ್ಳುತ್ತೇನೆ. ಜಾಗತಿಕ ಶಕ್ತಿಯ ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಮೆರಿಕನ್ ಕುಟುಂಬಗಳು ಮತ್ತು ವ್ಯವಹಾರಗಳನ್ನು ರಕ್ಷಿಸಲು ನಮ್ಮ ವಿಲೇವಾರಿಯಲ್ಲಿನ ಪ್ರತಿಯೊಂದು ಸಾಧನಗಳೊಂದಿಗೆ ಕೆಲಸ ಮಾಡ್ತೇವೆ ಎಂದಿದ್ದಾರೆ.
ಅಮೆರಿಕ ತನ್ನ ಪಾಲುದಾರ ಪೆಟ್ರೋಲಿಯಂ ನಿಕ್ಷೇಪಗಳಿಂದ 60 ಮಿಲಿಯನ್ ಬ್ಯಾರೆಲ್‌ಗಳ ತೈಲವನ್ನು ಸಾಮೂಹಿಕ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಆಯಕಟ್ಟಿನ ಮೀಸಲು ನಿಕ್ಷೇಪಗಳಲ್ಲಿನ ಅರ್ಧದಷ್ಟು ತೈಲ ಅಮೆರಿಕ ಮೂಲಕವೇ ಬರಲಿದೆ.
ಇದನ್ನೂ ಓದಿ:ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಖರೀದಿ ಸ್ಥಗಿತ: ಶೆಲ್ ಘೋಷಣೆ