ನವದೆಹಲಿ:ಕೋವಿಡ್ 2ನೇ ಅಲೆಯ ನಿರ್ಬಂಧಗಳ ಸಡಿಲಿಕೆಯಿಂದಾಗಿ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ದೇಶದಲ್ಲಿ ಸ್ಕೋಡಾ ಆಟೋ ಇಂಡಿಯಾ 2021ರ ಆಗಸ್ಟ್‌ನಲ್ಲಿ 3,829 ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಮಾರಾಟ ಪ್ರಮಾಣವನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 1,003 ಕಾರುಗಳನ್ನಷ್ಟೇ ಮಾತ್ರ ಮಾರಾಟ ಮಾಡಿತ್ತು ಎಂದು ಸ್ಕೋಡಾ ಆಟೋ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಹೊಸದಾಗಿ ಬಿಡುಗಡೆಯಾದ ಎಸ್‌ಯುವಿ ಕುಶಾಕ್ ಕಾರಿಗೆ ದೇಶದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇತರೆ ಕಾರು ಮಾದರಿಗಳಾದ ಸೂಪರ್ಬ್, ಆಕ್ಟೇವಿಯಾ ಮತ್ತು ರಾಪಿಡ್ ಕೂಡ ಮಾರಾಟ ಪ್ರಮಾಣ ಹೆಚ್ಚಳಕ್ಕೆ ಕೊಡುಗೆ ನೀಡಿವೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಮಾರಾಟದ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಕೋಡಾ ಇಂಡಿಯಾ ಬ್ರಾಂಡ್ ನಿರ್ದೇಶಕ ಜ್ಯಾಕ್ ಹ್ಯಾಲಿಸ್, ಆಗಸ್ಟ್‌ನಲ್ಲಿ ನಮ್ಮ ಕಾರುಗಳ ಮಾರಾಟವು ಗಮನಾರ್ಹ ಬೆಳವಣಿಗೆ ಕಂಡಿದೆ. ಇದು ಭಾರತದಲ್ಲಿ ಸ್ಕೋಡಾ ಬ್ರಾಂಡ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಕೋಡಾ ಆಟೋ ಇಂಡಿಯಾದಿಂದ ವಾಹನಗಳಿಗೆ ವಾರಂಟಿ, ನಿರ್ವಹಣೆ ಸೇವೆ ವಾಯ್ದೆ ವಿಸ್ತರಣೆ!
ಬ್ರಾಂಡ್‌ನ ಜಾಗತಿಕ ಬೆಳವಣಿಗೆ ಮಾರುಕಟ್ಟೆ ಮುಖ್ಯ. ಭಾರತದಲ್ಲಿ ನಮ್ಮ ಉಪಸ್ಥಿತಿಯನ್ನು ಬಲಪಡಿಸಲು ನಾವು ವಿವರವಾದ ಕಾರ್ಯತಂತ್ರ ಹೊಂದಿದ್ದೇವೆ. ನಮ್ಮ ಕೇಂದ್ರೀಕೃತ ಉತ್ಪನ್ನ ತಂತ್ರದ ಜೊತೆಗೆ, ನಮ್ಮ ಗ್ರಾಹಕರೊಂದಿಗೆ ಬಲವಾದ ಬಾಂಧವ್ಯ ನಿರ್ಮಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.