ಮುಂಬೈ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ಮುಂದುವರೆದಿದೆ.
ಮುಂಬೈ ಷೇರುಪೇಟೆಯಲ್ಲಿಂದು ಸತತ ಮೂರನೇ ದಿನವೂ ಸೆನ್ಸೆಕ್ಸ್ ನಷ್ಟದಲ್ಲಿ ಸಾಗಿದ್ದು, ದಿನದಾಂತ್ಯಕ್ಕೆ 769 ಅಂಕಗಳ ಕುಸಿತಗೊಂಡು 53,887ಕ್ಕೆ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 252 ಅಂಶಗಳ ನಷ್ಟದೊಂದಿಗೆ 16,245ಕ್ಕೆ ಬಂದು ನಿಂತಿತು.
ಟೈಟಾನ್, ಮಾರುತಿ ಸುಜುಕಿ ಇಂಡಿಯಾ, ಏಷ್ಯನ್ ಪೇಂಟ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಷೇರುಗಳ ಮೌಲ್ಯ ಭಾರಿ ಕುಸಿತ ಕಂಡವು. ಐಟಿಸಿ, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ಟೆಕ್ ಮಹೀಂದ್ರಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಾಭಗಳಿಸಿದ ಪ್ರಮುಖ ಸಂಸ್ಥೆಗಳಾಗಿವೆ.
ಏರುತ್ತಿರುವ ತೈಲ ಬೆಲೆಗಳು ಮತ್ತು ಪೂರೈಕೆ ಸರಪಳಿಯ ಅಡೆತಡೆಗಳ ಮೇಲಿನ ಅನಿಶ್ಚಿತತೆಗಳು ಹಣದುಬ್ಬರಕ್ಕೆ ಕಾರಣವಾಗುವ ಭಯವನ್ನು ಹುಟ್ಟುಹಾಕಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಉಕ್ರೇನ್‌ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾದ ದಾಳಿಯ ವರದಿಗಳು ಉದ್ವಿಗ್ನ ಮಟ್ಟವನ್ನು ಹೆಚ್ಚಿಸಿದ್ದರಿಂದ ಜಾಗತಿಕ ಷೇರುಗಳು ತೀವ್ರ ಮಾರಾಟಕ್ಕೆ ಸಾಕ್ಷಿಯಾಗುತ್ತಿವೆ. ಹಾಂಗ್ ಕಾಂಗ್, ಶಾಂಘೈ ಮತ್ತು ಟೋಕಿಯೋದಲ್ಲಿನ ಷೇರು ಪೇಟೆ ಭಾರಿ ಕೆಳಮಟ್ಟಕ್ಕೆ ಇಳಿದಿವೆ. ಇತ್ತ ಅಮೆರಿಕದ ಷೇರು ಮಾರುಕಟ್ಟೆಯೂ ನಷ್ಟದಲ್ಲಿ ಸಾಗಿದೆ.
ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.80 ಏರಿಕೆಯಾದ ನಂತರ 111.3 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆ ನಷ್ಟದ ಬಳಿಕ 76 ರೂಪಾಯಿಗೆ ತಲುಪಿದೆ.
ಇದನ್ನೂ ಓದಿ:ಯುದ್ಧ: ಕಳೆದ 10 ವರ್ಷದಲ್ಲೇ ಕಚ್ಚಾ ತೈಲದ ಬೆಲೆ ದಾಖಲೆಯ ಏರಿಕೆ.. ಗ್ರಾಹಕನ ಜೇಬಿಗೆ ಕತ್ತರಿ ಸಾಧ್ಯತೆ!!