ಮುಂಬೈ :ಜಾಗತಿಕ ಮಟದಲ್ಲಿ ತಲ್ಲಣ ಮೂಡಿಸಿದ್ದ ಒಮಿಕ್ರಾನ್ ವೈರಸ್ ಭೀತಿಯಿಂದ ಸತತ ಎರಡು ದಿನಗಳಿಂದ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆಯಲ್ಲಿಂದು ಗೂಳಿಯ ಓಟ ಮುಂದುವರಿಸಿದೆ.
ದಿನದಾಂತ್ಯಕ್ಕೆ ಸೆನ್ಸೆಕ್ಸ್ 887 ಅಂಕಗಳ ಜಿಗಿತಗೊಂಡು 57,633ರಲ್ಲಿ ವಹಿವಾಟು ನಡೆಸಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 264 ಅಂಕಗಳ ಏರಿಕೆಯಾಗಿ 17,176ಕ್ಕೆ ತಲುಪಿದೆ. ಹಿಂದೆ ನಷ್ಟ ಅನುಭವಿಸಿದ್ದ ಲೋಹ ಹಾಗೂ ಬ್ಯಾಂಕಿಂಗ್ ವಲಯ ಇಂದು ಲಾಭಗಳಿಸಿವೆ.
ಟಾಟಾ ಸ್ಟೀಲ್ ಲಾಭ ಗಳಿಸಿ ಅಗ್ರ ಕಂಪನಿಯಾಗಿದೆ. ಇದು ಶೇ.3.63ರಷ್ಟು ತನ್ನ ಷೇರುಗಳ ಮೇಲೆ ಲಾಭ ಗಳಿಸಿದೆ. ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ, ಎಸ್‌ಬಿಐ, ಟೈಟಾನ್ ಹಾಗೂ ಬಜಾಜ್ ಫೈನಾನ್ಸ್ ಲಾಭ ಗಳಿಸಿದ ಇತರೆ ಕಂಪನಿಗಳಾಗಿವೆ. ಏಷಿಯನ್ ಪೇಂಟ್ಸ್ ನಷ್ಟ ಹೊಂದಿದ ಪ್ರಮುಖ ಕಂಪನಿಗಳ ಪೈಕಿ ಅಗ್ರಸ್ಥಾನದಲ್ಲಿತ್ತು. ಈ ಕಂಪನಿ 0.22ರಷ್ಟು ನಷ್ಟು ಅನುಭವಿಸಿತು.
ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಷೇರುಗಳು ಲಾಭದಲ್ಲೇ ಮುಂದುವರಿಯುತ್ತವೆ. ಯಾಕೆಂದರೆ, ನಾಳೆ ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದೆ. ಅಲ್ಪಾವಧಿಯ ಅನಿಶ್ಚಿತತೆಗಳನ್ನು ಪರಿಗಣಿಸಿ ಹಣಕಾಸು ನೀತಿಗಳಲ್ಲಿ ಯಾವುದೇ ಬದಲಾವಣ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಕೋವಿಡ್ ರೂಪಾಂತರಿ ಡೆಲ್ಟಾ ವೈರಸ್‌ಗಿಂತ ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ಅಷ್ಟೊಂದು ಅಪಾಯಕಾರಿಯಲ್ಲ ಎಂದು ಕೆಲವು ಅಧ್ಯಯನಗಳ ವರದಿಗಳ ಪರಿಣಾಮ ಷೇರುಪೇಟೆಯಲ್ಲಿ ಸರಾತ್ಮಕ ಬೆಳವಣಿಗೆಗಳು ಕಂಡು ಬರುತ್ತಿವೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಹಾಂಗ್‌ಕಾಂಗ್, ಸಿಯೋಲ್ ಹಾಗೂ ಟೋಕಿಯೋ ಷೇರುಪೇಟೆಗಳು ಲಾಭದೊಂದಿಗೆ ಕೊನೆಗೊಂಡವು. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 2.26 ಡಾಲರ್ ಏರಿಕೆಯಾಗಿ 74.73 ಡಾಲರ್‌ಗೆ ಮಾರಾಟ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ 4 ಪೈಸೆ ಏರಿಕೆಯಾಗಿ 75.41 ರೂಪಾಯಿಯಲ್ಲಿ ವಹಿವಾಟು ನಡೆಸಿದೆ.
ಇದನ್ನೂ ಓದಿ:ಒಂದೇ ದಿನ 28,650 ರೂ.ಹೆಚ್ಚಿಸಿಕೊಂಡ ಬಿಟ್‌ಕಾಯಿನ್..