ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿ ಹಾಗೂ ರಷ್ಯಾ - ಉಕ್ರೇನ್ ಮಾತುಕತೆಗಳಲ್ಲಿನ ನಿರ್ಣಯದ ಭರವಸೆಯಿಂದಾಗಿ ಮುಂಬೈ ಷೇರುಪೇಟೆಯಲ್ಲಿಂದು ಗೂಳಿ ಆರ್ಭಟಿಸಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 879 ಅಂಕಗಳ ಭಾರಿ ಏರಿಕೆಯೊಂದಿಗೆ 56,656 ಹಾಗೂ ನಿಫ್ಟಿ 245 ಅಂಶಗಳ ಜಿಗಿತಗೊಂಡು 16,908ರಲ್ಲಿ ವಹಿವಾಟು ನಡೆಸುತ್ತಿವೆ.
ಹೆಚ್‌ಡಿಎಫ್‌ಸಿ ಟಾಪ್ ಗೇನರ್ ಆಗಿದ್ದು, ಶೇ.3.35 ರಷ್ಟು ಷೇರು ಮೌಲ್ಯವನ್ನು ಏರಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್ ಹಾಗೂ ಬಜಾಜ್ ಫೈನಾನ್ಸ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ಸನ್ ಫಾರ್ಮಾ ನಷ್ಟದಲ್ಲಿತ್ತು.
ರಷ್ಯಾದೊಂದಿಗಿನ ಮಾತುಕತೆಯಲ್ಲಿ ರಾಜಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಉಕ್ರೇನ್ ಹೇಳಿದೆ. ಉಕ್ರೇನ್ ಮತ್ತು ರಷ್ಯಾದ ಅಧಿಕಾರಿಗಳು ಮಂಗಳವಾರ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ ನಂತರ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬುಧವಾರ ರಷ್ಯಾದ ಬೇಡಿಕೆಗಳು ಹೆಚ್ಚು ವಾಸ್ತವಿಕವಾಗುತ್ತಿವೆ ಎಂದು ಹೇಳಿದ್ದರು.