ಮುಂಬೈ :ಕೋವಿಡ್ ರೂಪಾಂತರಿ ಒಮಿಕ್ರಾನ್ ಹೆಚ್ಚುತ್ತಿರುವುದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಧಿಸುತ್ತಿರುವ ನಿರ್ಬಂಧಗಳು ಮುಂಬೈ ಷೇರುಪೇಟೆಯಲ್ಲಿಂದು ಪರಿಣಾಮ ಬೀರಿದೆ. ವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 400 ಅಂಕಗಳ ಕುಸಿತ ಕಂಡು 56,679ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 128 ಅಂಕಗಳ ಇಳಿಕೆಯ ಬಳಿಕ 16,875ಕ್ಕೆ ತಲುಪಿದೆ.
ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಮಾರುತಿ ಹಾಗೂ ಟಾಟಾ ಸ್ಟೀಲ್ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದವು. ಆರಂಭದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಷೇರುಗಳ ಮೌಲ್ಯ ಶೇ.4ರಷ್ಟು ಕುಸಿತ ಕಂಡಿತು. ಪವರ್‌ಗ್ರಿಡ್, ಎಂ&ಎಂ ಹಾಗೂ ಡಾ ರೆಡ್ಡೀಸ್ ಲಾಭ ಗಳಿಸಿದವು.
ದೇಶದಲ್ಲಿ ಈವರೆಗೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 578 ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 130 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.