ಮುಂಬೈ :ಜಾಗತಿಕ ನಕರಾತ್ಮ ಮಾರುಕಟ್ಟೆ ನಡೆ ಅನುಸರಿಸಿದ ದೇಶಿ ಷೇರುಪೇಟೆ ವಾರಾಂತ್ಯದ ವಹಿವಾಟಿನಂದು ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿತು.
ಈಕ್ವಿಟಿ ಮಾರುಕಟ್ಟೆಯ ಹೆವಿವೇಯ್ಟ್ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್ಡಿಎಫ್ಸಿ ಷೇರುಗಳು ಲಾಭದ ಬಳಿಕ ಮಾರಾಟದ ಒತ್ತಡಕ್ಕೆ ಒಳಗಾದವು. ತತ್ಪರಿಣಾಮ ಸೆನ್ಸೆಕ್ಸ್ 129 ಅಂಕಗಳ ಇಳಿಕೆ ದಾಖಲಿಸಿತು. ಶುಕ್ರವಾರದ ವಹಿವಾಟು ಅಂತ್ಯದ ವೇಳೆಗೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 129.18 ಅಂಕ ಇಳಿಕೆಯಾಗಿ 37,606.89 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 28.70 ಅಂಕ ಕುಸಿದು 11,073.45 ಅಂಕಗಳ ಮಟ್ಟದಲ್ಲಿ ನಿರಾಶದಾಯಕವಾಗಿ ಕೊನೆಗೊಂಡಿತು.
ರಿಲಯನ್ಸ್ ಇಂಡಸ್ಟ್ರೀಸ್ ಸೆನ್ಸೆಕ್ಸ್ ಪಟ್ಟಿಯಲ್ಲಿ ಗರಿಷ್ಠ ಮೌಲ್ಯದಲ್ಲಿ ಷೇರು ಮೌಲ್ಯ ಕುಸಿತವಾಯಿತು. ಲಾಭದ ಬಳಿಕದ ಮಾರಾಟದ ಒತ್ತಡಕ್ಕೆ ಒಳಗಾಯಿತು. ಕಂಪನಿಯು ಗುರುವಾರದಂದು ಜುಲೈ ತ್ರೈಮಾಸಿಕದಲ್ಲಿ 13,248 ಕೋಟಿ ರೂ. ಆದಾಯ ವರದಿ ಮಾಡಿದೆ. ಹೆಚ್ಡಿಎಫ್ಸಿ ಬ್ಯಾಂಕ್, ಏಷ್ಯಾನ್ ಪೇಯಿಂಟ್ಸ್, ಕೊಟಾಕ್ ಬ್ಯಾಂಕ್, ಬಜಾಜ್ ಆಟೋ ಹಾಗೂ ಹೆಚ್ಡಿಎಫ್ಸಿ ಟಾಪ್ ಲೂಸರ್ಗಳಾದರೇ ಸನ್ ಫಾರ್ಮಾ, ಎಂ&ಎಂ, ಹೆಚ್ಸಿಎಲ್ ಟೆಕ್ ಮತ್ತು ಆ್ಯಕ್ಸಸ್ ಬ್ಯಾಂಕ್ ಟಾಪ್ ಗೇನರ್ಗಳ ಸಾಲಿಗೆ ಸೇರಿದರು.
ಅಮೆರಿಕ ಆರ್ಥಿಕತೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.33ರಷ್ಟು ವಾರ್ಷಿಕ ದರದಲ್ಲಿ ಕುಸಿತ ಕಂಡಿದೆ. ಕೊರೊನಾ ವೈರಸ್ನಿಂದ ಏಕಾಏಕಿ ವ್ಯವಹಾರಗಳ ಸ್ಥಗಿತ, ಹತ್ತಾರು ಮಿಲಿಯನ್ ನೌಕರರ ವಜಾ ಮತ್ತು ಶೇ 14.7ಕ್ಕೆ ತಲುಪಿದ ನಿರುದ್ಯೋಗದ ಪ್ರಮಾಣವು ಈವರೆಗಿನ ಅತ್ಯಂತ ಕೆಟ್ಟ ತ್ರೈಮಾಸಿಕ ಕುಸಿತವಾಗಿದೆ ಎಂದು ಟ್ರಂಪ್ ಸರ್ಕಾರ ಹೇಳಿದೆ. ಇದು ಕೂಡ ಜಾಗತಿಕ ಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಕಾರಣವಾಯಿತು.