ನವದೆಹಲಿ:ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು 2020-21ರ ಆರ್ಥಿಕ ವರ್ಷದಲ್ಲಿ ಶೇ 20ರಷ್ಟು ಕುಸಿದು 2,36,802 ಯುನಿಟ್ಗಳಿಗೆ ತಲುಪಿದೆ ಎಂದು ಸೊಸೈಟಿ ಆಫ್ ಮ್ಯಾನ್ಯುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ (ಎಸ್ಎಂಇವಿ) ತಿಳಿಸಿದೆ.
2019-20ರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (ಇ 2 ಡಬ್ಲ್ಯೂ), ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು (ಇ 3 ಡಬ್ಲ್ಯೂ) ಮತ್ತು ಎಲೆಕ್ಟ್ರಿಕ್ ನಾಲ್ಕು ಚಕ್ರಗಳ (ಇ 4 ಡಬ್ಲ್ಯೂ) ಸೇರಿದಂತೆ ಎಲೆಕ್ಟ್ರಿಕ್ ವಾಹನಗಳ (ಇವಿ) ಮಾರಾಟವು 2,95,683 ಯುನಿಟ್ಗಳಷ್ಟಿತ್ತು.
2020-21ರ ಆರ್ಥಿಕ ವರ್ಷದಲ್ಲಿ ಇ 2 ಡಬ್ಲ್ಯೂ ವಿಭಾಗದ ಮಾರಾಟವು ಶೇ 6ರಷ್ಟು ಇಳಿದು 1,43,837ಕ್ಕೆ ತಲುಪಿದೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ 1,52,000 ಯುನಿಟ್ ಮಾರಾಟ ಆಗಿದ್ದವು. 2020-21ರ ಹಣಕಾಸು ವರ್ಷದಲ್ಲಿ ಇ 2 ಡಬ್ಲ್ಯೂ ಹೈಸ್ಪೀಡ್ ಮತ್ತು ಕಡಿಮೆ -ಸ್ಪೀಡ್ ಮಾರಾಟವು ಕ್ರಮವಾಗಿ 40,836 ಮತ್ತು 1,03,000 ಯುನಿಟ್ ಆಗಿದೆ ಎಂದು ಎಸ್ಎಂಇವಿ ಪ್ರಕಟಣೆಯಲ್ಲಿ ತಿಳಿಸಿದೆ.
ಇ 3 ಡಬ್ಲ್ಯೂ ವಿಭಾಗವು 88,378 ಯುನಿಟ್ ಮಾರಾಟ ದಾಖಲಿಸಿದೆ. ಸಾರಿಗೆ ಪ್ರಾಧಿಕಾರದಲ್ಲಿ ನೋಂದಾಯಿಸದ ಇ 3 ಡಬ್ಲ್ಯೂ ಡೇಟಾ ಒಳಗೊಂಡಿಲ್ಲ. ಇ 4 ಡಬ್ಲ್ಯೂ ವಿಭಾಗದಲ್ಲಿ 4,588 ಯುನಿಟ್ ನೋಂದಣಿಯಾಗಿವೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿನ 3,000 ಯುನಿಟ್ಗಳಿಗೆ ಹೋಲಿಸಿದರೆ, ಶೇ 53ರಷ್ಟು ಹೆಚ್ಚಾಗಿದೆ.
ಮಾರಾಟದ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಿದ ಎಸ್ಎಂಇವಿ ಮಹಾನಿರ್ದೇಶಕ ಸೊಹಿಂದರ್ ಗಿಲ್, 2021ರ ವಿತ್ತೀಯ ವರ್ಷದ ಪ್ರಾರಂಭವಾಗುವ ಮೊದಲು ನಾವು ಉತ್ತಮ ಬೆಳವಣಿಗೆ ನಿರೀಕ್ಷಿಸುತ್ತಿದ್ದೇವೆ. ಆದರೆ ವಿವಿಧ ಕಾರಣಗಳಿಂದಾಗಿ ಮಾರಾಟವು ಸ್ಥಿರವಾಗಿ ಉಳಿದಿದೆ. ಎಲೆಕ್ಟ್ರಿಕ್ ತ್ರಿಚಕ್ರ ಮತ್ತು ದ್ವಿಚಕ್ರ ವಾಹನ ವಿಭಾಗದ ಮಾರಾಟವು ನಿಂತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ ಎಂದರು.